ಸೆಪ್ಟೆಂಬರ್ 2 ಬಂತು ಅಂದರೆ ಕಿಚ್ಚ ಸುದೀಪ್ ಅಭಿಮಾನಿಗಳಲ್ಲಿ ಹಬ್ಬದ ಸಂಭ್ರಮ ಇರುತ್ತೆ. ಯಾಕೆಂದರೆ, ಕಿಚ್ಚ ಸುದೀಪ್ ಹುಟ್ಟಿದ ದಿನ. ಹೀಗಾಗಿ, ಸಾವಿರಾರು ಸಂಖ್ಯೆಯಲ್ಲಿ ಸುದೀಪ್ ಅಭಿಮಾನಿಗಳು ಜೆಪಿನಗರದ ಸುದೀಪ್ ನಿವಾಸದಲ್ಲಿ ಸೇರಿ ಹಬ್ಬದಂತೆ ಆಚರಿಸುತ್ತಿದ್ರು.
ಆದರೆ, ಎರಡು ವರ್ಷದಿಂದ ಸುದೀಪ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಈ ವರ್ಷವು ಕೂಡ ಸುದೀಪ್ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ತೀರ್ಮಾನಿಸಿದ್ದಾರೆ. ಯಾಕೆಂದರೆ, ಕರ್ನಾಟಕ ಹಾಗೂ ಬೆಂಗಳೂರು ಸೇರಿ ಕೊರೊನಾ ಹಾವಳಿ ಕಡಿಮೆ ಆಗಿಲ್ಲ. ಹೀಗಾಗಿ ಎಲ್ಲರೂ ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ಇದೆ. ಈ ಕಾರಣಕ್ಕೆ ಸುದೀಪ್ ಹುಟ್ಟುಹಬ್ಬದ ದಿನ ಯಾರೂ ಮನೆ ಬಳಿ ಬರಬೇಡಿ ಎಂದು ಕಿಚ್ಚ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ನಾವು ಕೊರೊನಾ ವಿರುದ್ಧ ಹೋರಾಟ ಮಾಡ್ತಿದ್ದೇವೆ. ಇನ್ನೂ ಅದರ ವಿರುದ್ಧ ಹೋರಾಡಬೇಕಿದೆ. ಈ ಕೊರೊನಾ ಸಮಯದಲ್ಲಿ ಜನರನ್ನ ಒಟ್ಟುಗೂಡಿಸಿಬಾರದು. ಜನರನ್ನ ಗುಂಪು ಸೇರಿಸಿದ್ರೆ ನಾವು 10 ಹೆಜ್ಜೆ ಹಿಂದೆ ಇಟ್ಟಂತೆ. ಹೀಗಾಗಿ, ಈ ಸಮಯದಲ್ಲಿ ನಾವು ಸಂಭ್ರಮಿಸುವುದು ಬೇಡ, ನಿಮ್ಮ ಕುಟುಂಬ, ನನ್ನ ಕುಟುಂಬ ಇದ್ದಂತೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ ಮನೆ ಬಳಿ ಯಾರೂ ಬರಬೇಡಿ. ನಿಮ್ಮನ್ನ ಭೇಟಿ ಮಾಡಲು ನನ್ನ ಮನಸ್ಸು ತುಡಿಯುತ್ತಿದೆ. ಆದರೆ, ಏನು ಮಾಡೋದು?. ಕೊರೊನಾದಿಂದಾಗಿ ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಅಂತಾ ಸುದೀಪ್ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ಕಾರಣಕ್ಕಾಗಿಯೇ ಸುದೀಪ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಬರ್ತ್ಡೇ ಆಚರಿಸಲು ತಯಾರಾಗಿದ್ದಾರೆ. ಅದಕ್ಕಾಗಿ ಸುದೀಪ್ ಬರ್ತ್ಡೇ ಡಿಪಿಯನ್ನ ಸಹಾ ಅನಾವರಣ ಮಾಡಿದ್ದಾರೆ. ಆದರೆ, ರಾಜ್ಯದ ಮೂಲೆಗಳಲ್ಲಿರುವ ತಮ್ಮ ಅಭಿಮಾನಿಗಳಿಗೆ ಹುಟ್ಟುಹಬ್ಬ ಆಚರಿಸಲು ಸುದೀಪ್ ಕರೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಬಡವರಿಗೆ, ಊಟ ಇಲ್ಲದವರಿಗೆ ಸಹಾಯ ಮಾಡಿ ಅಂತಾ ಅಭಿಮಾನಿಗಳಿಗೆ ಕಿಚ್ಚ ಮನವಿ ಮಾಡಿದ್ದಾರೆ.