2021ನೇ ವರ್ಷ ಮುಗಿಯೋದಕ್ಕೆ ಐದು ದಿನಗಳ ಬಾಕಿ. ಆದರೆ, ಈ 2021 ಕನ್ನಡ ಚಿತ್ರರಂಗದ ಪಾಲಿಗೆ ಅಕ್ಷರಶಃ ಕರಾಳ ವರ್ಷವಾಗಿದೆ. ಏಕೆಂದರೆ ಕನ್ನಡ ಚಿತ್ರರಂಗದ ಪ್ರಖ್ಯಾತ ನಟ, ನಟಿಯರು, ನಿರ್ದೇಶಕರು ಹಾಗೂ ಪೋಷಕ ಕಲಾವಿದರು ಈ ವರ್ಷ ನಿಧನರಾಗಿದ್ದಾರೆ. ಹಾಗಾದರೆ ಯಾರೆಲ್ಲಾ ತಾರೆಯರು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಏಪ್ರಿಲ್ನಲ್ಲಿ ಕೋಟಿ ರಾಮು ನಿಧನ
2021ರಲ್ಲಿ ಕನ್ನಡ ಚಿತ್ರರಂಗ ನಿಧಾನವಾಗಿ ಎಲ್ಲ ಚಟುವಟಿಕೆಗಳಲ್ಲಿ ಬ್ಯುಸಿಯಾಗುತ್ತಿದ್ದ ಸಮಯ. ಆ ಸಮಯಲ್ಲಿ ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಘಾತದ ಸುದ್ದಿ ಕೇಳಿ ಬಂದಿದ್ದು, ಕೋಟಿ ನಿರ್ಮಾಪಕ ಅಂತಾ ಕರೆಸಿಕೊಂಡಿದ್ದ ರಾಮು ಅವರ ನಿಧನ. ಹೌದು ಕನ್ನಡ ಚಿತ್ರರಂಗದಲ್ಲಿ ಸಿಂಹದ ಮರಿ, ಲಾಕಪ್ ಡೆತ್, ಸರ್ಕಲ್ ಇನ್ಸ್‌ಪೆಕ್ಟರ್, ಚಾಮುಂಡಿ, ಬಾವ ಬಾಮೈದ ಹೀಗೆ 35ಕ್ಕೂ ಹೆಚ್ಚು ಸಿನಿಮಾಗಳನ್ನ ನಿರ್ಮಾಣ ಮಾಡಿ ಹಾಗೂ ವಿತರಣೆಯನ್ನ ಮಾಡಿದ್ದ, ಸ್ನೇಹಜೀವಿಯಾಗಿದ್ದ ಕೋಟಿ ರಾಮು ಏಪ್ರಿಲ್ 26ರಂದು ಕೊರೊನಾಗೆ ಬಲಿಯಾದರು.
ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಹಾಗೂ ವಿತರಕರಾಗಿದ್ದ ಕೆ.ಸಿ.ಎನ್ ಚಂದ್ರುಶೇಖರ್, ಬಹು ಅಂಗಾಂಗ ವೈಫಲ್ಯದಿಂದ, ಜೂನ್ 14ರಂದು ನಿಧನರಾದರು. ಹುಲಿ ಹಾಲಿನ ಮೇವು, ಬಬ್ರುವಾಹನ ಸೇರಿ ಅನೇಕ ಚಿತ್ರಗಳನ್ನ ಕೆ.ಸಿ.ಎನ್ ಚಂದ್ರಶೇಖರ್ ನಿರ್ಮಾಣ ಮಾಡಿದ್ದರು.
ಕವಿರತ್ನಕಾಳಿ ದಾಸ, ಅಂಜದ ಗಂಡು, ಶಬರಿಮಲೆ ಶ್ರೀ ಅಯ್ಯಪ್ಪ ಹೀಗೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ, ಹಿರಿಯ ನಿರ್ದೇಶಕ ರೇಣುಕಾ ಶರ್ಮಾ ಕೂಡ ನಿಧನರಾದರು. ನ್ಯೂಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದ ರೇಣುಕಾ ಶರ್ಮಾ, ಕೊರೊನಾಗೆ ಮೇ 5ರಂದು ವಿಧಿವಶರಾಗುತ್ತಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅಕಾಲಿಕ ಮರಣ
ಇನ್ನು ಕನ್ನಡ ಚಿತ್ರರಂಗಕ್ಕೆ ದೊಡ್ಡ ಶಾಕಿಂಗ್ ನ್ಯೂಸ್ ಆಗಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅಕಾಲಿಕ ಮರಣ. "ನಾನು ಅವನಲ್ಲ ಅವಳು" ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ವಿಜಯ್ ತಮ್ಮನ್ನು ವಿಶಿಷ್ಟ ಪಾತ್ರಗಳಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿದ್ದರು. ಸ್ನೇಹಿತನ ಜೊತೆ ಬೈಕ್ ನಲ್ಲಿ ಹೋಗುವಾಗ ಅಪಘಾತಕ್ಕೀಡಾಗಿ, ಮೆದುಳಿಗೆ ಪೆಟ್ಟು ಬಿದ್ದ ಕಾರಣ ಜೂನ್ 15ರಂದು ಸಂಚಾರಿ ವಿಜಯ್ ನಿಧನರಾದರು. ನಾತಿಚರಾಮಿ,ತೆಲೆದಂಡ, 6ನೇ ಮೈಲಿ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ವಿಜಯ್ ಮನೋಘ್ನ ಅಭಿನಯ ಮಾಡಿದ್ದಾರೆ.
ಇನ್ನು ಕನ್ನಡ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲ ಖಳನಾಯಕನಾಗಿ ಮಿಂಚಿದ ನಟ ಸತ್ಯಜಿತ್. ಕನ್ನಡದ ಎಲ್ಲಾ ಸ್ಟಾರ್ ನಟರ ಜೊತೆ ಅಭಿನಯಿಸಿದ್ದ ಸತ್ಯಜಿತ್, ಅಕ್ಟೋಬರ್ 10, 2021 ರಂದು ವಯೋಸಹಜ ಕಾಯಿಲೆಯಿಂದ ನಿಧನರಾದರು.
ಕನ್ನಡ ಚಿತ್ರರಂಗಕ್ಕೆ ಆಘಾತ ನೀಡಿದ ಸಾವಿದು!
ಇನ್ನು ಕನ್ನಡ ಚಿತ್ರರಂಗಲ್ಲ ಅಲ್ಲದೇ ಯಾರು ಊಹಿಸಲು ಆಗೋದಕ್ಕೆ ಆಗದ ಹಾಗೂ ಇಡೀ ಭಾರತೀಯ ಚಿತ್ರರಂಗಕ್ಕೆ ದೊಡ್ಡ ಆಘಾತ ಉಂಟು ಮಾಡಿದ ಸುದ್ದಿ ಅಂದ್ರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ಮರಣ.
ಹೌದು ಡಾ. ರಾಜಕುಮಾರ್ ರವರ ಮುದ್ದಿನ ಮಗ ಹಾಗೂ ದೊಡ್ಮನೆ ಮಗ ಪುನೀತ್ ರಾಜ್ ಕುಮಾರ್, ಬಾಲನಟನಾಗಿ ರಾಷ್ಟ್ರ ಪ್ರಶಸ್ತಿ ಪಡೆದು, ನಂತರ ನಾಯಕನಾಗಿ ತಮ್ಮ ಅಭಿನಯದಿಂದ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ನಟನೆ, ನೃತ್ಯ, ಸಾಹಸ ದೃಶ್ಯಗಳು ಹಾಗೂ ತನ್ನ ನಗು ಮುಖದಿಂದ ಕನ್ನಡಿಗರ ಮನ ಗೆದ್ದಿದ್ದ ಪುನೀತ್, ಆಕ್ಟೋಬರ್ 29, 2021 ರಂದು ಹೃದಯ ಸ್ತಂಭನದಿಂದ ವಿಧಿವಶರಾದರು. ಅಪ್ಪುವಿನ ಅಂತ್ಯಕ್ರಿಯೆಗೆ ದಾಖಲೆಯಷ್ಟು ಜನ ಸೇರಿದ್ದು, 2021ನೇ ವರ್ಷ ಕನ್ನಡ ಚಿತ್ರರಂಗದಲ್ಲಿ ಕರಾಳ ವರ್ಷ ಅಂದ್ರೆ ತಪ್ಪಿಲ್ಲ.
ಅಪ್ಪು ಅಗಲಿಕೆ ಬಳಿಕ ಹಿರಿಯ ನಟ ಶಿವರಾಮ್ ಕೂಡ ನಿಧನರಾದರು. ಕನ್ನಡ ಚಿತ್ರರಂಗದಲ್ಲಿ ಆರು ದಶಕಗಳಿಗೂ ಹೆಚ್ಚು ಕಾಲ ನಟಿಸಿದ್ದ ಶಿವರಾಮ್ 2021 ಡಿಸೆಂಬರ್ 4 ರಂದು ಮನೆಯಲ್ಲಿ ಜಾರಬಿದ್ದು, ಮೆದುಳಿನ ರಕ್ತಸ್ರಾವದಿಂದ ಇಹಲೋಕ ತ್ಯಜಿಸಿದರು.
ಈ ತಾರೆಯರ ಜೊತೆ ಕನ್ನಡದ ಪ್ರಖ್ಯಾತ ಹಾಸ್ಯ ನಟಿ ಜಯಾ ಹಾಗೂ ನಟ ಶಂಖನಾದ ಅರವಿಂದ್ ಅಣ್ಣಯ್ಯ ಮತ್ತು ರನ್ನ ಸಿನಿಮಾ ಖ್ಯಾತಿಯ ಚಂದ್ರಶೇಖರ್, ಮತ್ತು ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾದ ನಿರ್ಮಾಪಕ ಮಂಜುನಾಥ್, ಬೆಳ್ಳಿ ಕಾಲುಂಗರ ಹಾಗು ಯುದ್ದಕಾಂಡ ಸಿನಿಮಾದ ನಿರ್ದೇಶಕ ಕೆ.ವಿ ರಾಜು ಸೇರಿದಂತೆ ಹಲವಾರು ತಾರೆಯರು, ನಿರ್ದೇಶರು ಹಾಗೂ ನಿರ್ಮಾಪಕರು ಈ 2021ರಲ್ಲಿ ನಿಧನರಾಗಿದ್ದಾರೆ. ಈ 2021 ಕನ್ನಡ ಚಿತ್ರರಂಗಕ್ಕೆ ದುರಂತ ವರ್ಷ ಅಂದ್ರೆ ತಪ್ಪಿಲ್ಲ.