2019ನೇ ವರ್ಷಕ್ಕೆ ಗುಡ್ ಬೈ ಹೇಳಿ 2020ರ ಹೊಸ ವರ್ಷವನ್ನು ಸ್ವಾಗತಿಸುವ ಸಮಯ ಬಂದಿದೆ. ಈ ವರ್ಷದಲ್ಲಿ ಸ್ಯಾಂಡಲ್ವುಡ್ನಲ್ಲಿ ಅನೇಕ ಬದಲಾವಣೆಗಳು ಆಗಿವೆ. ಅದೇ ರೀತಿ ಸ್ಯಾಂಡಲ್ವುಡ್ ಅನೇಕ ಸ್ಟಾರ್ಗಳ ಲೈಫ್ನಲ್ಲೂ ಚೇಂಜ್ ಆಗಿದ್ದು, ಯಾವ ನಟ ನಟಿಯರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂಬುದರ ಬಗ್ಗೆ ಒಂದು ಸುತ್ತು ಕಣ್ಣಾಡಿಸೋಣ. ಈ ವರ್ಷ ಬಹುತೇಕ ನಟನಟಿಯರು, ಸ್ಟಾರ್ ಮಕ್ಕಳು ಸಪ್ತಪದಿ ತುಳಿದಿದ್ದಾರೆ.
ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಗಮನ ಸೆಳೆದಿದ್ದ ನಟಿ ನೇಹಾ ಪಾಟೀಲ್ ವರ್ಷದ ಆರಂಭದಲ್ಲೇ ಹಸೆಮಣೆ ಏರಿದ್ರು 2018ರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಪ್ರಣವ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ನೇಹಾ, ಫೆಬ್ರವರಿ 22, 2019 ರಲ್ಲಿ ಸಪ್ತಪದಿ ತುಳಿದರು.
ಇನ್ನು, ಈ ವರ್ಷ ಸಂಚಲನ ಮೂಡಿಸಿದ ಮದುವೆ ಅಂದ್ರೆ ಸ್ಯಾಂಡಲ್ವುಡ್ ಚಿರಯೌವನೆ, ಮೋಸ್ಟ್ ಗ್ಲಾಮರಸ್ ನಟಿ ಸುಮನ್ ರಂಗನಾಥನ್ ಅವರದ್ದು. ಜೂನ್ 7ರಂದು ಅಮೆರಿಕದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಸಜನ್ ಅವರನ್ನು ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾದರು.
ಇದಲ್ಲದೆ ಈ ವರ್ಷ ದೊಡ್ಮನೆಯಲ್ಲೂ ಓಲಗದ ಸದ್ದು ಕೇಳಿಸಿತು. ಡಾ.ರಾಜ್ ಕುಮಾರ್ ಮೊಮ್ಮಗ, ರಾಘಣ್ಣನ ಎರಡನೇ ಮಗ ಯುವ ರಾಜ್ ಕುಮಾರ್ ಮೇ 26ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮೈಸೂರಿನ ಹುಡುಗಿ ಬಹುಕಾಲದ ಗೆಳತಿ ಶ್ರೀದೇವಿ ಜೊತೆ ಯುವರಾಜ್ ಬೆಂಗಳೂರಿನ ಅರಮನೆಯಲ್ಲಿ ನಡೆದ ಅದ್ಧೂರಿ ಮದುವೆಯಲ್ಲಿ ಕೈ ಹಿಡಿದರು.
ಈ ವರ್ಷ ಸ್ಯಾಂಡಲ್ವುಡ್ ಕನಸುಗಾರ ರವಿ ಮಾಮ ಕೂಡಾ ಮಗಳಿಗೆ ಮದುವೆ ಮಾಡಿದ್ರು. ಮುದ್ದು ಮಗಳು ಗೀತಾಂಜಲಿಯನ್ನು ಬ್ಯುಸಿನೆಸ್ ಮ್ಯಾನ್ ಅಜಯ್ ಜೊತೆ ಮೇ 29 ರಂದು ಸಂಪ್ರದಾಯಬದ್ಧವಾಗಿ ಮದುವೆ ಮಾಡಿಕೊಟ್ಟರು.
ಇನ್ನು, ಮಂಗಳೂರು ಮೂಲದ ನಟಿ ಯಜ್ಞಾ ಶೆಟ್ಟಿ ಕೂಡಾ ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿ ಎಲ್ಲರಿಗೂ ಅಚ್ಚರಿ ನೀಡಿದ್ದರು. ಸಂದೀಪ್ ಶೆಟ್ಟಿ ಅವರನ್ನು ಮಂಗಳೂರಿನಲ್ಲಿ ಅಕ್ಟೋಬರ್ 29ರಂದು ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಯಜ್ಞಾ ವಿವಾಹವಾದರು.
ಆ ದಿನಗಳು ಖ್ಯಾತಿಯ ನಟಿ ಅರ್ಚನಾ ಕೂಡ ಇದೇ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನವೆಂಬರ್ 13ಕ್ಕೆ ಅರ್ಚನಾ ವೇದಾ ಅಲಿಯಾಸ್ ಅರ್ಚನಾ ಶಾಸ್ತ್ರಿ ಹೈದರಾಬಾದ್‌ನಲ್ಲಿ ಜಗದೀಶ್ ಜೊತೆ ಸಪ್ತಪದಿ ತುಳಿದಿದ್ದಾರೆ.
ಆಪರೇಷನ್ ಅಲಮೇಲಮ್ಮ ಮೂಲಕ ಸ್ಯಾಂಡಲ್ವುಡ್ನಲ್ಲಿ ಕಮಾಲ್ ಮಾಡಿ, ಕವಲುದಾರಿ ಹಿಡಿದು ಜನಮನ ಗೆದ್ದ ನಟ ರಿಷಿ ಕೂಡ ಈ ವರ್ಷ ಸಂಸಾರಿಯಾಗಿಬಿಟ್ರು. ನವೆಂಬರ್ 10ರಂದು ಬರಹಗಾರ್ತಿ ಸ್ವಾತಿ ಜೊತೆ ರಿಷಿ ಸಪ್ತಪದಿ ತುಳಿದರು. ಚೆನೈನಲ್ಲಿ ಸರಳವಾಗಿ ವಿವಾಹ ವಾದ ರಿಷಿ ಜೋಡಿ ನವೆಂಬರ್ 20ರಂದು ಬೆಂಗಳೂರಿನಲ್ಲಿ ಆರತಕ್ಷತೆ ಮಾಡಿಕೊಂಡರು.
'ಅದ್ಧೂರಿ’ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಭರ್ಜರಿಯಾಗಿ ಎಂಟ್ರಿ ಕೊಟ್ಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ಜೊತೆ ಸಪ್ತಪದಿ ತುಳಿದರು. ನವೆಂಬರ್ 24ರಂದು ವೈವಾಹಿಕ ಜೀವನಕ್ಕೆ ಅದ್ದೂರಿಯಾಗಿ ಕಾಲಿಟ್ಟ ಧ್ರುವ 14 ವರ್ಷದ ಪ್ರೀತಿಗೆ ಮದುವೆಯ ಮುದ್ರೆ ಒತ್ತಿ ಮನೆಯವರ ಮುಂದೆ ಸತಿಪತಿ ಆದರು.
ಇದಲ್ಲದೆ ಕಿರುತೆರೆ ಹಾಗೂ ಬೆಳ್ಳಿ ತೆರೆ ತಾರಾ ಜೋಡಿ ಸಿಹಿ ಕಹಿ ಚಂದ್ರು ಹಾಗೂ ಗೀತಾ ಅವರ ಮಗಳು ಹಿತಾ ಹಸೆ ಮಣೆ ಏರಿದ್ರು. ಹಾಗೇ ಸುಮ್ಮನೆ ಖ್ಯಾತಿಯ ನಟ ಕಿರಣ್ ಶ್ರೀನಿವಾಸ್ ಜೊತೆ ಹಿತಾ ಡಿಸೆಂಬರ್ 1 ರಂದು ಕಂಕಣ ಕಟ್ಟಿಸಿಕೊಂಡ್ರು.
ಇನ್ನು ನಟಿ ರಚಿತಾ ರಾಮ್ ಅಕ್ಕ ನಿತ್ಯಾರಾಮ್ ಮದುವೆ ಕೂಡಾ ಡಿಸೆಂಬರ್ 6 ರಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ಜರುಗಿತು. ನಿತ್ಯಾ ಮದುವೆಗೆ ಹಿರಿತೆರೆ ಕಿರುತೆರೆ ಗಣ್ಯರು ಬಂದು ಶುಭ ಹಾರೈಸಿದರು.
ಗಿರೀಶ್ ಕಾಸರವಳ್ಳಿ ಹಾಗೂ ವೈಶಾಲಿ ಕಾಸರವಳ್ಳಿ ಪುತ್ರಿ ಅನನ್ಯ ಕಾಸರವಳ್ಳಿ ಕೂಡಾ ಈ ವರ್ಷ ಫೆಬ್ರವರಿಯಲ್ಲಿ ಸಂತೋಷ್ ಎಂಬುವವರನ್ನು ವರಿಸಿದ್ದಾರೆ.
'ಜೋಶ್' ಚಿತ್ರದ ಮೂಲಕ ನಿನಿಕರಿಯರ್ ಆರಂಭಿಸಿ ಜಗನ್ನಾಥ್ ಚಂದ್ರಶೇಖರ್ ಕೂಡಾ ತಮ್ಮ ಧೀರ್ಘಕಾಲದ ಗೆಳತಿ ರಕ್ಷಿತ ಜೊತೆ ಮೇ 23 ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
ರ್‍ಯಾಪರ್ ಅಲೋಕ್ ಕೂಡಾ ತಾವು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ನಿಶಾ ಎಂಬುವವರನ್ನು ಈ ವರ್ಷ ಕೈ ಹಿಡಿದಿದ್ದಾರೆ.