ಮುಂಬೈ(ಮಹಾರಾಷ್ಟ್ರ): ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ನೀಡಿದ್ದ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಕಂಗನಾ ರಣಾವತ್ ಇಂದು ಮುಂಬೈನ ಖಾರ್ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ.
ಕಂಗನಾ ರಣಾವತ್ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸಿದ ರೈತರಿಗೆ ಪ್ರತ್ಯೇಕತಾವಾದಿ ಗುಂಪಿನೊಂದಿಗೆ ಸಂಬಂಧ ಇದೆ ಎಂದು ಆರೋಪಿಸಿದ್ದರು. ಇದರಿಂದಾಗಿ ನಟಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಕಂಗನಾ ಇಂದು ಪೊಲೀಸರ ಮುಂದೆ ಹಾಜರಾಗಿದ್ದಾರೆ.
ಡಿಸೆಂಬರ್ 22 ರಂದು ಖಾರ್ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಕಂಗನಾ ಪರ ವಕೀಲರು ಮುಂಬೈ ಹೈಕೋರ್ಟ್‌ಗೆ ತಿಳಿಸಿದ್ದರು. ಬುಧವಾರ ಹಾಜರಾಗಲು ಸಾಧ್ಯವಾಗದ ಹಿನ್ನೆಲೆ ಬೇರೆ ದಿನ ನಿಗದಿ ಮಾಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆ ಇಂದು ವಿಚಾರಣೆಗೆ ಆಗಮಿಸಿದ್ದಾರೆ.
ಏನಿದು ಪ್ರಕರಣ:
ವಾಸ್ತವವಾಗಿ, ಸರ್ಕಾರವು ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಂಡಾಗ, ಕಂಗನಾ ಅದರ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡುವ ಪೋಸ್ಟ್ ಮಾಡಿದ್ದರು. ಈ ಸಂದರ್ಭದಲ್ಲಿ, ನಟಿ ಸಿಖ್ ಸಮುದಾಯದ ವಿರುದ್ಧ ಟೀಕೆಗಳನ್ನು ಮಾಡಿದರು. ಸಿಖ್ ಸಮುದಾಯಕ್ಕೆ ನೋವುಂಟು ಮಾಡುವ ಕೆಲವು ಪದಗಳನ್ನು ಬಳಸಿದ್ದರು.
ಇನ್ಸ್ಟಾಗ್ರಾಮ್ನಲ್ಲಿ ಸಿಖ್ರ ವಿರುದ್ಧದ ಪೋಸ್ಟ್‌ಗಾಗಿ ಅವರು ಬುಧವಾರ ಖಾರ್ ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ದಾಖಲು ಮಾಡಬೇಕಿತ್ತು. ಈ ಹಿಂದೆ ಇದೇ ವಿಚಾರದ ಕುರಿತಂತೆ ಡಿಸೆಂಬರ್ 13ರಂದು ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್, ಡಿಸೆಂಬರ್ 22ರಂದು ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಸೂಚನೆ ನೀಡಿತ್ತು. ಮುಂದಿನ ಹೈಕೋರ್ಟ್ ವಿಚಾರಣೆ ಜನವರಿ 25ರಂದು ನಡೆಯಲಿದ್ದು, ಅಲ್ಲಿವರೆಗೆ ಕಂಗನಾ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರಲು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿತ್ತು. ಇದರೊಂದಿಗೆ ನಟಿಯ ವಿರುದ್ಧ ದೇಶಾದ್ಯಂತ ದಾಖಲಾಗಿರುವ ಎಲ್ಲಾ ಎಫ್‌ಐಆರ್‌ಗಳನ್ನು ಮುಂಬೈನ ಖಾರ್ ಪೊಲೀಸ್ ಠಾಣೆಗೆ ವರ್ಗಾಯಿಸಲು ನಿರ್ದೇಶನ ನೀಡಬೇಕೆಂದು ವಕೀಲ ಚರಂಜೀತ್ ಸಿಂಗ್ ಚಂದ್ರಪಾಲ್ ಹೈಕೋರ್ಟ್‌ಗೆ ಮನವಿ ಮಾಡಿದ್ದರು.