ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ಕನ್ನಡಿಗ' ಚಿತ್ರೀಕರಣ ಭರದಿಂದ ಸಾಗುತ್ತಿದೆ. ಅಕ್ಟೋಬರ್ನಲ್ಲಿಈ ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಚಿಕ್ಕಮಗಳೂರು, ಶಿವಮೊಗ್ಗದ ಸುಂದರ ತಾಣಗಳಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಇದೀಗ ಖ್ಯಾತ ನಟ ಜೇಮಿ ಆಲ್ಟರ್ 'ಕನ್ನಡಿಗ' ಚಿತ್ರತಂಡವನ್ನು ಸೇರಿಕೊಂಡಿದ್ದಾರೆ.
ಜೇಮಿ ಆಲ್ಟರ್, ಖ್ಯಾತ ನಟ ಟಾಮ್ ಆಲ್ಟರ್ ಪುತ್ರ. ಟಾಮ್ ಆಲ್ಟರ್ ಹಲವು ವರ್ಷಗಳ ಹಿಂದೆ ಅನಂತ್ ನಾಗ್ ಅಭಿನಯದ 'ಕನ್ನೇಶ್ವರ ರಾಮ' ಚಿತ್ರದಲ್ಲಿ ಬ್ರಿಟಿಷ್ ಅಧಿಕಾರಿಯ ಪಾತ್ರ ಮಾಡಿದ್ದರು. ಈಗ ಅವರ ಮಗ ಜೇಮಿ, 'ಕನ್ನಡಿಗ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಅವರು ಕನ್ನಡದ ಮೊದಲ ನಿಘಂಟು ಬರೆದ ಫರ್ಡಿನೆಂಡ್ ಕಿಟ್ಜೆಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಿಟ್ಜೆಲ್ ಮೂಲಕ ಜರ್ಮನ್ ಆದರೂ ಅಲ್ಲಿಂದ ಕರ್ನಾಟಕಕ್ಕೆ ಬಂದು ಕನ್ನಡ ಕಲಿತು, ಕನ್ನಡದ ಮೊದಲ ನಿಘಂಟನ್ನು ಬರೆದವರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಈಗ ಚಿತ್ರದಲ್ಲಿ ಅವರ ಭಾಗದ ಚಿತ್ರೀಕರಣ ಶುರುವಾಗಿದ್ದು, ಅದಕ್ಕಾಗಿ ಜೇಮಿ ಮುಂಬೈನಿಂದ ಬಂದು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ.
ಜೇಮಿ ಅವರು ಕೆಟಲ್ ಪಾತ್ರದಲ್ಲಿ ಕಾಣಿಸಿಕೊಂಡರೆ, ರವಿಚಂದ್ರನ್ ಲಿಪಿಕಾರ ಗುಣಭದ್ರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಸ್ವಾತಂತ್ರ್ಯ ಸಂಗ್ರಾಮ ಮುಗಿದು ಕೆಲವು ವರ್ಷಗಳ ನಂತರ ನಡೆಯುವ ಕಥೆ ಇರುವ ಈ ಚಿತ್ರಕ್ಕೆ 'ಜಟ್ಟ' ಖ್ಯಾತಿಯ ಗಿರಿರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಎನ್.ಎಸ್. ರಾಜಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ರವಿಚಂದ್ರನ್ ಮತ್ತು ಜೇಮಿ ಜತೆಗೆ ಪಾವನ ಗೌಡ, ಬಾಲಾಜಿ ಮನೋಹರ್, ಸುಮಲತಾ ಅಂಬರೀಶ್, ಅಚ್ಯುತ್ ಕುಮಾರ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.