ಸ್ಯಾಂಡಲ್ವುಡ್ ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಇಂಡಿಯಾ vs ಇಂಗ್ಲೆಂಡ್ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಮುಂದಿನ ವರ್ಷ ಜನವರಿ ಕೊನೆ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ. ಇಂಡಿಯಾ vs ಇಂಗ್ಲೆಂಡ್, 'ಆದರೆ ಇದು ಕ್ರಿಕೆಟ್ ಅಲ್ಲ'ಎಂಬ ಟ್ಯಾಗ್ ಲೈನ್ ಕೊಟ್ಟು ಟೈಟಲ್ನಿಂದಲೇ ಸಿನಿ ಪ್ರಿಯರನ್ನು ಈ ಮೇಷ್ಟ್ರು ಟ್ಯ್ರಾಕ್ ಮಾಡಿದ್ದಾರೆ.
ಇದು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 15ನೇ ಸಿನಿಮಾ. ಚಿತ್ರದ ಕಥೆ, ನಟ-ನಟಿಯರ ಆಯ್ಕೆ, ನಿರ್ದೇಶನ ಎಲ್ಲದರಲ್ಲೂ ಪ್ರಯೋಗ ಮಾಡಿರುವ ಮೇಷ್ಟ್ರು ಈ ಸಿನಿಮಾ ನಿರ್ದೇಶನದ ಜೊತೆ ವಿತರಣೆ ಜವಾಬ್ದಾರಿ ಕೂಡಾ ಹೊತ್ತು ಹೊಸ ಅವತಾರ ತಾಳಿದ್ದಾರೆ. ಇಂಡಿಯಾ vs ಇಂಗ್ಲೆಂಡ್ ಎರಡು ದೇಶಗಳ ನಡುವಿನ ಸಂಸ್ಕೃತಿ ಹಾಗೂ ಆಚಾರ-ವಿಚಾರಗಳನ್ನು ಇಟ್ಟುಕೊಂಡು ಕಥೆ ಹೆಣೆದಿರುವ ಸಿನಿಮಾ. ಕಂಚಿನ ಕಂಠದ, ಮಾಸ್ ಪಾತ್ರಗಳ ಮೂಲಕವೇ ತಮ್ಮನ್ನು ಗುರುತಿಸಿಕೊಂಡಿದ್ದ ವಸಿಷ್ಠ ಸಿಂಹ ಅವರನ್ನು ಈ ಚಿತ್ರದಲ್ಲಿ ಮೇಷ್ಟ್ರು ತಿದ್ದಿ-ತೀಡಿ ಲವರ್ ಬಾಯ್ ರೂಪ ಕೊಟ್ಟಿದ್ದಾರೆ. ಲಾಂಗ್ ಹಿಡಿದು ಹೀರೋಗಳ ಜೊತೆ ಕಾದಾಡುತ್ತಿದ್ದ ವಸಿಷ್ಠ ಈ ಚಿತ್ರದಲ್ಲಿ ರೋಸ್ ಹಿಡಿದು ಟಗರು ಪುಟ್ಟಿ ಮಾನ್ವಿತ ಜೊತೆ ಡ್ಯುಯೆಟ್ ಆಡಿದ್ದಾರೆ. ಅಲ್ಲದೆ ಈ ಚಿತ್ರಕ್ಕಾಗಿ ವಸಿಷ್ಠ ಸಖತ್ ವರ್ಕೌಟ್ ಮಾಡಿ ತಮ್ಮ ಗೆಟಪನ್ನು ಬದಲಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಮಾನ್ವಿತ ಇಂಡಿಯಾವನ್ನು ಪ್ರತಿನಿಧಿಸಿದರೆ, ವಸಿಷ್ಠ ಸಿಂಹ ಇಂಗ್ಲೆಂಡನ್ನು ಪ್ರತಿನಿಧಿಸಿದ್ದು ಇವರಿಬ್ಬರ ನಡುವಿನ ಕೆಲವು ಸನ್ನಿವೇಶಗಳನ್ನು ಕ್ರೈಮ್ ಥ್ರಿಲ್ಲರ್ ಮುಖಾಂತರ ರೊಮ್ಯಾಂಟಿಕ್ ಆಗಿ ಹೇಳಲು ಹೊರಟಿರುವ ಸ್ಯಾಂಡಲ್ವುಡ್ ಮೇಷ್ಟ್ರು ,ಮುಂದಿನ ವರ್ಷ ಜನವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ರೆಡಿಯಾಗಿದ್ದಾರೆ. ಇನ್ನು ಈ ಚಿತ್ರ ಬಹುತೇಕ ಇಂಗ್ಲೆಂಡ್ನಲ್ಲಿ ಶೂಟಿಂಗ್ ಆಗಿದ್ದು ಈಗಾಗಲೇ ಈ ಸಿನಿಮಾ ಕೊಲ್ಕತ್ತಾ ಫಿಲಂ ಫೆಸ್ಟಿವಲ್ ಹಾಗೂ ಇಂಗ್ಲೆಂಡ್ನಲ್ಲಿ ಪ್ರೀಮಿಯರ್ ಶೋ ಆಗಿದೆ. ಚಿತ್ರಕ್ಕೆ ಸಿಕ್ಕಿರುವ ರೆಸ್ಪಾನ್ಸ್ಗೆ ಚಿತ್ರತಂಡ ಫುಲ್ ಖುಷಿ ಆಗಿದೆ. ಇನ್ನು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು ಶೀಘ್ರದಲ್ಲೇ ಹಾಡುಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.