ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಕನ್ನಡಿಗರಿಗೆ ಚಿರಪರಿಚಿತರಾದ ಭೂಮಿ ಶೆಟ್ಟಿ, 'ಇಕ್ಕಟ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇದೀಗ ಮತ್ತೊಂದು ವಿಭಿನ್ನ ಕಥೆ ಆಧರಿಸಿರೋ 'ಇನಾಮ್ದಾರ್' ಎಂಬ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರ್ತಾ ಇದ್ದಾರೆ.
ಭೂಮಿ ಶೆಟ್ಟಿ ಕಪ್ಪು ಸುಂದರಿಯಾಗಿ ಅಂದ್ರೆ, ಬುಡಕಟ್ಟು ಜನಾಂಗದ ಹುಡುಗಿಯಾಗಿ ಅಭಿನಯಿಸುತ್ತಿದ್ದಾರೆ. ಸದ್ಯಕ್ಕೆ ಈ ಚಿತ್ರದ ಫಸ್ಟ್ ಲುಕ್ ಅನ್ನು ಚಿತ್ರತಂಡ ಅನಾವರಣ ಮಾಡಿದೆ. ಫಸ್ಟ್ಲುಕ್ನಲ್ಲಿ ಉತ್ತರ ಕರ್ನಾಟಕದ ಹೊಸ ಪ್ರತಿಭೆ ರಂಜನ್ ಛತ್ರಪತಿ ಕಾಡನ್ನ ಕಾಯುವ ಪಾತ್ರ ಮಾಡಿದ್ದಾರೆ. ಈ ಹಿಂದೆ 'ಕತ್ತಲೆಕೋಣೆ' ಎಂಬ ಚಿತ್ರವನ್ನ ನಿರ್ದೇಶಿಸಿದ್ದ ಸಂದೇಶ್ ಶೆಟ್ಟಿ ಅಜ್ರಿ, 'ಇನಾಮ್ದಾರ್' ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ.
ನಿರ್ದೇಶಕ ಸಂದೇಶ್ ಶೆಟ್ಟಿ ಅಜ್ರಿ ಹೇಳುವ ಹಾಗೇ, ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ವಾಸಿಸುವ ಕಾಡಿನ ಜನರಿಗೆ ಹಾಗೂ ಉತ್ತರ ಕರ್ನಾಟಕದ ಇನಾಮ್ದಾರ್ ಕುಟುಂಬಕ್ಕೆ ಇರುವ ನಂಟನ್ನು ಹಾಗೂ ಕಪ್ಪು, ಬಿಳುಪು ವರ್ಣದ ಜನರ ಘರ್ಷಣೆ ಸುತ್ತ ಈ ಚಿತ್ರಕಥೆ ಹೆಣೆದಿದ್ದೇನೆ. ಕಾಡಿನ ಮುಗ್ಧ ಜನರಿಗೆ ಆಗುತ್ತಿರುವ ಅನ್ಯಾಯ ಎತ್ತಿಹಿಡಿಯುವ ಪ್ರಯತ್ನ ಮಾಡುತ್ತಿದ್ದೇನೆ.
ಡಬಲ್ ಸ್ಕ್ರೀನ್ ಪ್ಲೇ ನಡುವೆ ನಮ್ಮ ಚಿತ್ರದ ಕಥೆ ಸಾಗುತ್ತದೆ. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಇನಾಮ್ದಾರ್ ಕುಟುಂಬಗಳಿವೆ. ಅದಕ್ಕೆ ಅದರದೇ ಆದ ಕಥೆಯೂ ಇದೆ. ನಾವು ಆಯ್ಕೆ ಮಾಡಿಕೊಂಡಿರುವ 'ಇನಾಮ್ದಾರ್' ಶಿವಾಜಿ ಮಹಾರಾಜರ ಮಗ ಶಂಭು ಮಾಹಾರಾಜರ ವಂಶಸ್ಥರದು. ಈ ಚಿತ್ರಕ್ಕೆ ಕಪ್ಪು ಸುಂದರಿಯ ಸುತ್ತ ಎಂಬ ಅಡಿಬರಹ ಕೂಡ ಇದೆ ಎಂದಿದ್ದಾರೆ.
ಸಿನಿಮಾದಲ್ಲಿ ರಂಜನ್ ಛತ್ರಪತಿ ಎಂಬ ಹೊಸ ಪ್ರತಿಭೆ ನಾಯಕನಾಗಿ ಕಾಣಿಸಿಕೊಂಡಿದ್ದು, ಭೂಮಿ ಶೆಟ್ಟಿ, ಎಸ್ತರ್ ನರೋನ, ಪ್ರಮೋದ್ ಶೆಟ್ಟಿ, ಶರತ್ ಲೋಹಿತಾಶ್ವ, ಎಂ.ಕೆ.ಮಠ, ರಘು ಪಾಂಡೇಶ್ವರ್ ಸೇರಿದಂತೆ ಮುಂತಾದವರ ತಾರಾ ಬಳಗವಿದೆ.
ಸುನೀಲ್ ನರಸಿಂಹಮೂರ್ತಿ ಛಾಯಾ ಗ್ರಹಣ, ರಾಕಿ ಸೋನು ಈ ಚಿತ್ರಕ್ಕೆ ಸಂಗೀತ ನೀಡಿದ್ದು, ಶಿವರಾಜ್ ಮೇಹು ಸಂಕಲನವಿದೆ. ಉತ್ತರ ಕರ್ನಾಟಕದ ಬಾಲಚಂದ್ರ ಇನಾಮ್ದಾರ್ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ. ತಪ್ಸೆ ಗುಡ್ಡ ಪ್ರದೇಶ ಅರಣ್ಯದಲ್ಲಿ ಮುಂದಿನ ತಿಂಗಳಿನಿಂದ ಈ ಸಿನಿಮಾ ಚಿತ್ರೀಕರಣ ಶುರುವಾಗಲಿದೆ.