ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಇದೀಗ ಅಭಿಮಾನಿಗಳಿಗಾಗಿ ಪತ್ರ ಬರೆದಿದ್ದಾರೆ. ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸಲಾಗುತ್ತಿದ್ದು, ಈ ಬಗ್ಗೆ ಸ್ವತಃ ಅವರೇ ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದಾರೆ.
'ಪೂಜ್ಯ ಕರ್ನಾಟಕವೇ, ನಾನು ಆರೋಗ್ಯವಾಗಿದ್ದೇನೆ. ನನಗೆ ಆರೋಗ್ಯ ತಪ್ಪಿದೆ ಎಂದು ಇಡೀ ಕರ್ನಾಟಕದಿಂದ ಕರೆಗಳು ಬರುತ್ತಿವೆ. ಎಲ್ಲರೂ ಆರೋಗ್ಯದ ಕುರಿತು ವಿಚಾರಿಸುತ್ತಿದ್ದಾರೆ. ನಿಮ್ಮ ಪ್ರೀತಿ ಎಷ್ಟು ಎಂದು ನನಗೆ ಗೊತ್ತಾಗಿದೆ. ಇದಕ್ಕೆ ಧನ್ಯವಾದ ಹೇಳಿದರೆ ಸಾಕಾಗುವುದಿಲ್ಲ.
ಈ ಪ್ರೀತಿಯನ್ನು ಪಡೆಯೋಕೆ ನಾನು ತುಂಬಾನೇ ಪುಣ್ಯ ಮಾಡಿದ್ದೆ. ಇದರ ಸುಖ ಇವತ್ತು ಅನುಭವಿಸುತ್ತಿದ್ದೀನಿ. ನಾನು ಕೇಳದೇ ನನ್ನ ಮನೆಗೆ ಸರ್ಕಾರ ಭದ್ರತೆಯನ್ನು ಕೊಟ್ಟಿದೆ. ಇಡೀ ಕರ್ನಾಟಕದ ಲಕ್ಷಾಂತರ ಜನ ಅಭಿಮಾನಿಗಳು ನನ್ನ ಪರವಾಗಿ ಮಾತನಾಡುತ್ತಿದ್ದಾರೆ.
ನನ್ನ ಉದ್ಯಮದ ಆತ್ಮೀಯರು ನನಗೆ ಧೈರ್ಯ ತೋರಿದ್ದಾರೆ. ಈಗ ಇಡೀ ಕರ್ನಾಟಕವೇ ನನ್ನನ್ನು ಪ್ರೀತಿಯಲ್ಲಿ ಮುಳುಗಿಸಿ ಅಭಿಮಾನದಲ್ಲಿ ತೇಲಾಡಿಸುತ್ತಿರುವುದಕ್ಕೆ ನನ್ನ ಕೃತಜ್ಞತೆಗಳು. ನಿಮ್ಮ ಪ್ರೀತಿಗೆ ನನ್ನ ಹೃದಯ ತುಂಬಿದೆ, ನಮಸ್ಕಾರಗಳು' ಎಂದು ಹಂಸಲೇಖ ಪತ್ರದಲ್ಲಿ ತಿಳಿಸಿದ್ದಾರೆ.
ಇತ್ತೀಚೆಗೆ ಹಂಸಲೇಖ ಕಾರ್ಯಕ್ರಮವೊಂದಲ್ಲಿ ಮಾತನಾಡುತ್ತಾ ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಕುರಿತ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿವಾದ ಸೃಷ್ಟಿಸಿತ್ತು. ಅಲ್ಲದೇ ಈ ಬಗ್ಗೆ ಪರ-ವಿರೋಧ ಚರ್ಚೆಗೆ ದಾರಿ ಮಾಡಿಕೊಟ್ಟಿತ್ತು. ಬಳಿಕ ಹಂಸಲೇಖ ಕ್ಷಮೆ ಯಾಚಿಸಿದ್ದರು.
ಇದನ್ನೂ ಓದಿ: ಮೈಸೂರು : ಹಂಸಲೇಖ ಹೇಳಿಕೆಗೆ ಬೆಂಬಲಿಸಿ ಬಾಡೂಟ ಮಾಡಿದ ದಲಿತ ಸಂಘರ್ಷ ಸಮಿತಿ