ಕನ್ನಡ ಚಿತ್ರರಂಗದಲ್ಲಿ ಕೆಲ ನಟರು ಹೆಣ್ಣಿನ ವೇಶ ತೊಟ್ಟು ಸೈ ಎನ್ನಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕೋಟ್ಯಾಂತರ ಅಭಿಮಾನಿಗಳ ಆರಾದ್ಯ ದೈವ ನಟ ಡಾ.ರಾಜ್ ಕುಮಾರ್. ಕುರುಡನ ಪಾತ್ರದಿಂದ ಹಿಡಿದು ಪೌರಾಣಿಕ ಅಷ್ಟೇ ಯಾಕೆ ಹೆಣ್ಣಿನ ವೇಷ ಧರಿಸಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.
1965ರಲ್ಲಿ ತೆರೆ ಕಂಡ ಚಂದ್ರಹಾಸ ಎಂಬ ಸಿನಿಮಾದಲ್ಲಿ ಈ ನಟಸಾರ್ವಭೌಮ ಹೆಣ್ಣಿನ ವೇಷ ತೊಟ್ಟು ನಟಿಸಿ ಮಿಂಚಿದ್ದಾರೆ. ಈ ಕಲಾಪುತ್ರನೊಂದಿಗೆ ಹಾಸ್ಯ ಚಕ್ರವರ್ತಿ ನರಸಿಂಹರಾಜ್ ಕೂಡ ಹೆಣ್ಣಿನ ವೇಷದಲ್ಲಿ ಮಿಂಚಿದ್ರು. ನಿರ್ದೇಶಕ ಬಿ ಎಸ್ ರಂಗಾ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ರು. ಕಥೆ ಡಿಮ್ಯಾಂಡ್ ಮಾಡಿದ್ದರಿಂದ ಡಾ.ರಾಜ್ ಹೆಣ್ಣಿನ ವೇಷ ಹಾಕಿದ್ರು.
ಅಣ್ಣಾವ್ರ ಬಳಿಕ ಸ್ಯಾಂಡಲ್ವುಡ್ನಲ್ಲಿ ಹೆಣ್ಣಿನ ವೇಷ ಧರಿಸಿದ ನಟ ಶ್ರೀಧರ್, 1992ರಲ್ಲಿ ತೆರೆಕಂಡ ಬೊಂಬಾಟ್ ಹೆಂಡ್ತಿ ಸಿನಿಮಾದಲ್ಲಿ ಹೆಣ್ಣಿನ ವೇಷ ಹಾಕಿದ್ರು. ಪಿ ಎನ್ ರಾಮಚಂದ್ರ ರಾವ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ, ಮನೆ ಬಾಡಿಗೆ ಪಡೆಯಲು ಶ್ರೀಧರ್ ಹೆಣ್ಣಿನ ವೇಶದಲ್ಲಿ ಬರುವ ಸನ್ನಿವೇಶ ನೋಡುಗರನ್ನು ನಕ್ಕು ನಲಿಸುತ್ತದೆ. ಶ್ರೀಧರ್ ಜೊತೆ ಸಿಹಿಕಹಿ ಚಂದ್ರು ಕಾಮಿಡಿ ಬೊಂಬಾಟ್ ಆಗಿ ವರ್ಕ್ ಔಟ್ ಆಗಿತ್ತು. ಇವತ್ತಿಗೂ ಶ್ರೀಧರ್ ಲೇಡಿ ಗೆಟಪ್ ಸನ್ನೀವೇಶದ ದೃಶ್ಯ ನೋಡುಗರಿಗೆ ಕಿಕ್ ಕೊಡುತ್ತೆ.
ಕನ್ನಡ ಚಿತ್ರರಂಗದಲ್ಲಿ ಆನಂದ್ ಸಿನಿಮಾ ಬಳಿಕ ಬ್ಯಾಕ್ ಟೂ ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟು ಹ್ಯಾಟ್ರಿಕ್ ಹೀರೋ ಅಂತಾ ಕರೆಯಿಸಿಕೊಂಡ ನಟ ಶಿವರಾಜ್ ಕುಮಾರ್. ಸೆಂಚುರಿ ಸಿನಿಮಾಗಳ ಸರ್ದಾರ ಅಂತಾ ಬ್ರ್ಯಾಂಡ್ ಆಗಿರುವ ಶಿವಣ್ಣ ಕೂಡ ಹೆಣ್ಣಿನ ಪಾತ್ರದಲ್ಲಿ ಮಿಂಚಿದ್ದಾರೆ. 1996ರಲ್ಲಿ ತೆರೆಕಂಡು, ಸೂಪರ್ ಹಿಟ್ ಆದ ಸಿನಿಮಾ ಅಣ್ಣಾವ್ರ ಮಕ್ಕಳು. ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ತ್ರಿಪಾತ್ರದಲ್ಲಿ ಅಭಿನಯಿಸಿದ್ದರು. ಹೆಣ್ಣಿನ ವೇಷ ಹಾಕಿಕೊಂಡು, ವೇಶ್ಯೆವಾಟಿಕೆ ಮನೆಯನ್ನು ರೈಡ್ ಮಾಡುವ ಸನ್ನಿವೇಶ ಅದು. ಫಣಿ ರಾಮಚಂದ್ರ ನಿರ್ದೇಶನದ ಈ ಚಿತ್ರದಲ್ಲಿ ಶಿವಣ್ಣ ಲೇಡಿ ಅವತಾರದಲ್ಲಿ ಮಿಂಚಿದ್ರು.
ಇನ್ನು ಒಂದೇ ಚಿತ್ರದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್, ರೆಬಲ್ ಸ್ಟಾರ್ ಅಂಬರೀಶ್, ದೇವರಾಜ್ ಹಾಗೂ ಶಶಿಕುಮಾರ್ ಹೆಣ್ಣಿನ ವೇಷ ಹಾಕಿದ್ದಾರೆ. ಅದುವೇ 1999ರಲ್ಲಿ ರಿಲೀಸ್ ಆದ ಸೂಪರ್ ಹಿಟ್ ಸಿನಿಮಾ ಹಬ್ಬ. ಐದು ಜನ ಅಣ್ಣತಮ್ಮಂದಿರ ಕಥೆ ಆಧರಿಸಿದ ಈ ಚಿತ್ರದಲ್ಲಿ, ತಮ್ಮನ ಮದುವೆಗಾಗಿ ವಿಷ್ಣುವರ್ಧನ್, ಅಂಬರೀಶ್, ದೇವರಾಜ್, ಶಶಿಕುಮಾರ್ ಲೇಡಿ ಅವತಾರದಲ್ಲಿ ಬೆಳ್ಳಿ ತೆರೆ ಮೇಲೆ ಮಿಂಚಿದ್ರು. ನಿರ್ದೇಶಕ ಡಿ.ರಾಜೇಂದ್ರ ಬಾಬು ಬಹು ತಾರಾಗಣ ಇಟ್ಟುಕೊಂಡು ಈ ಸಿನಿಮಾವನ್ನು ನಿರ್ದೇಶನ ಮಾಡಿದ್ರು.
ಕನ್ನಡ ಚಿತ್ರರಂಗದಲ್ಲಿ ನವರಸ ನಾಯಕನಾಗಿ ಹೊರ ಹೊಮ್ಮಿರುವ ನಟ ಜಗ್ಗೇಶ್, ತಮ್ಮ ಮ್ಯಾನರಿಸಂನಿಂದಲೇ ನೋಡುಗರನ್ನು ನಕ್ಕು ನಲಿಸುವವರು. ಮೇಕಪ್ ಸಿನಿಮಾದಲ್ಲಿ ಹೆಣ್ಣಿನ ವೇಷ ಹಾಕಿದ್ದಾರೆ. 2002ರಲ್ಲಿ ಬಂದ ಈ ಚಿತ್ರದಲ್ಲಿ ಜಗ್ಗೇಶ್ ದಪ್ಪ ದೇಹ ಹೊಂದಿದ ಹೆಣ್ಣಿನ ಅವತಾರದಲ್ಲಿ ಕಾಣಿಸಿದ್ರು. ಈ ಚಿತ್ರದಲ್ಲಿ ಬಾಲಿವುಡ್ ನಟ ಶಕ್ತಿ ಕಪೂರ್ ಖಳ ನಟನಾಗಿ ಅಭಿನಯಿಸಿದ್ರು. ಈ ಚಿತ್ರಕ್ಕೆ ಸಂಗೀತಂ ಶ್ರೀನಿವಾಸರಾವ್ ಅವರ ನಿರ್ದೇಶನವಿತ್ತು. ಆ ದಿನಗಳಲ್ಲಿ ಈ ಸಿನಿಮಾ ಜಗ್ಗೇಶ್ಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು.
ಇತ್ತೀಚಿನ ವರ್ಷಗಳಲ್ಲಿ ಹೆಣ್ಣಿನ ವೇಷ ಧರಿಸಿ ಪ್ರೇಕ್ಷಕರನ್ನು ರಂಜಿಸುತ್ತಿರುವ ನಟ ಶರಣ್. ರ‍್ಯಾಂಬೋ ಸಿನಿಮಾ ಮೂಲಕ ಹೀರೋ ಪಟ್ಟ ಅಲಂಕರಿಸಿದ ಶರಣ್, ಹೆಣ್ಣಿನ ಪಾತ್ರದಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಜೈಲಲಿತಾ ಎಂಬ ಸಿನಿಮಾದಲ್ಲಿ ಶರಣ್ ನಾಲ್ಕೈದು ಕಾಸ್ಟೂಮ್ನಲ್ಲಿ, ಹೆಣ್ಣಿನ ವೇಷ ಹಾಕುವ ಮೂಲಕ ಸಿನಿಮಾ ಪ್ರಿಯರನ್ನು ರಂಜಿಸಿದ್ರು. ಈ ಸಿನಿಮಾ ಬಳಿಕ ವಿಕ್ಟರಿ 2 ಚಿತ್ರದಲ್ಲಿ ಮತ್ತೆ ಲೇಡಿ ಗೆಟಪ್ ಹಾಕಿ ಮಿಂಚಿದ್ರು. ಅಚ್ಚರಿ ವಿಷ್ಯ ಅಂದ್ರೆ ಸದ್ಯ ಕನ್ನಡದಲ್ಲಿ ಬೇಡಿಕೆಯ ಖಳ ನಟನಾಗಿ ಹೊರ ಹೊಮ್ಮಿರುವ, ರವಿಶಂಕರ್ ಕೂಡ ಇದೇ ಸಿನಿಮಾದಲ್ಲಿಯೇ ಹೆಣ್ಣಿನ ವೇಷ ಧರಿಸಿ ಶರಣ್‌ಗೆ ಸಾಥ್ ನೀಡಿದ್ದಾರೆ. ಕಥೆಗೋಸ್ಕರ ಶರಣ್ ಹೆಣ್ಣಿನ ವೇಷ ಧರಿಸಿ ಸಕ್ಸಸ್ ಆಗಿದ್ದಾರೆ.
ಹಾಸ್ಯ ನಟ, ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕನಾಗಿ ಸ್ಯಾಂಡಲ್ವುಡ್ನಲ್ಲಿ ಸಕ್ಸಸ್ ಕಂಡಿರುವ ನಟ ಸಾಧು ಕೋಕಿಲ ಕೂಡ ಹಲವಾರು ಸಿನಿಮಾಗಳಲ್ಲಿ ಹೆಣ್ಣಿನ ವೇಷ ಹಾಕುವ ಮೂಲಕ ನೋಡುಗರನ್ನು ನಕ್ಕು ನಲಿಸಿದ್ದಾರೆ.
ಇವ್ರು ಅಷ್ಟೇ ಅಲ್ಲಾ ಪ್ರಣಯ ರಾಜ ಶ್ರೀನಾಥ್, ಹಿರಿಯ ಹಾಸ್ಯ ನಟ ಉಮೇಶ್, ರಾಜ್‌ಕುಮಾರ್ ಸಂಬಂಧಿ ಬಾಲಾಜಿ, ಮೋಹನ್, ಸಂಚಾರಿ ವಿಜಯ್ ಹೀಗೆ ಕನ್ನಡ ಚಿತ್ರರಂಗದ ಸಾಕಷ್ಟು ನಟರು ಹೆಣ್ಣಿನ ವೇಷ ಧರಿಸಿ ಕೋಟ್ಯಂತರ ಅಭಿಮಾನಿಗಳಿಂದ ಶಿಳ್ಳೆ, ಚಪ್ಪಾಳೆ ಜೊತೆಗೆ ಎಲ್ಲಾ ಪಾತ್ರಕ್ಕೂ ಸೈ ಅಂದಿದ್ದಾರೆ. ಇದಿಷ್ಟು ಕನ್ನಡ ಚಿತ್ರರಂಗದಲ್ಲಿ ಹೆಣ್ಣಿನ ವೇಷ ಹಾಕಿ ಬೆಳ್ಳಿ ತೆರೆ ಮೇಲೆ ಕಮಾಲ್ ಮಾಡಿರುವ ಕನ್ನಡ ನಟರ ಲೇಡಿ ಅವತಾರದ ಕಹಾನಿ.