ಚೆನ್ನೈ: ಹೃದಯಸ್ತಂಭನ(cardiac arrest) ದಿಂದ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಜನಪ್ರಿಯ ತಮಿಳು ಹಾಸ್ಯನಟ ಪದ್ಮಶ್ರೀ ಪುರಷ್ಕೃತ ವಿವೇಕ್(59) ಅವರು ನಿಧನರಾಗಿದ್ದಾರೆ.
ನಿನ್ನೆ ಹೃದಯಸ್ತಂಭನ ಕಾಣಿಸಿಕೊಂಡ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿವೇಕ್ ಅವರು ಗುರುವಾರ ಕೋವಿಡ್ ಲಸಿಕೆ ತೆಗೆದುಕೊಂಡಿದ್ದರು. ಲಸಿಕೆ ಪಡೆದ ನಂತರ ಈ ಬಗ್ಗೆ ಜಾಗೃತಿ ಸಹ ಮೂಡಿಸಿದ್ದರು.
ಶುಕ್ರವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ವಿವೇಕ್ ಅವರನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಯ ತುರ್ತು ವಾರ್ಡ್‌ಗೆ ಕರೆತರಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ವಿವೇಕ್ ಅವರಿಗೆ ಎಕ್ಸ್‌ಟ್ರಾಕಾರ್ಪೊರಿಯಲ್ ಮೆಂಬ್ರೇನ್ ಆಕ್ಸಿಜನೇಷನ್ (ಇಸಿಎಂಒ) ಸಹಾಯದೊಂದಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ವಿವೇಕ್ ಅವರು ತಮಗೆ ಎದೆನೋವು ಕಾಣಿಸಿಕೊಂಡ ಬಗ್ಗೆ ತಮ್ಮ ಕುಟುಂಬ ಸದಸ್ಯರಿಗೆ ತಿಳಿಸಿದ್ದರು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ತಮಿಳುನಾಡಿನ ಕೋವಿಲ್‌ಪಟ್ಟಿನ್‌ನಲ್ಲಿ ಜನಿಸಿದ್ದ ವಿವೇಕ್, 1987ರಲ್ಲಿ ದಿವಂಗತ ಕೆ.ಬಾಲಚಂದ್ರ ನಿರ್ದೇಶನದ "ಮನತಿಲ್ ಉರುಧಿ ವೆಂಡಮ್" ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಅಲ್ಪ ಅವಧಿಯಲ್ಲೇ ಬೇಡಿಕೆಯ ನಟರಾದ ವಿವೇಕ್ ಅವರು, ರಜನಿಕಾಂತ್, ವಿಜಯ್, ಅಜಿತ್, ಸೂರ್ಯ ಮತ್ತು ಇತರ ಸ್ಟಾರ್ ನಟರೊಂದಿಗೆ ಅಭಿನಯಿಸಿದ್ದೆರು. ಒಟ್ಟು 200ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ಅವರದ್ದಾಗಿದೆ.
ಪರಿಸರ ಕಾಳಜಿ:
ವಿವೇಕ್, ದಿವಂಗತ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಬಹುದೊಡ್ಡ ಅಭಿಮಾನಿಯಾಗಿದ್ದರು. ಗ್ರೀನ್ ಕಲಾಂ ಯೋಜನೆಯಡಿ ಅವರು ಲಕ್ಷಾಂತರ ಸಸಿಗಳನ್ನು ನೆಡುವುದಲ್ಲದೆ, ಮರ ಬೆಳೆಸುವುದು ಮತ್ತು ಪರಿಸರ ಸಂರಕ್ಷಣೆಯ ಸಾಮೂಹಿಕ ಅಭಿಯಾನಗಳಲ್ಲಿ ಮುಂಚೂಣಿಯಲ್ಲಿದ್ದರು.
ವಿವೇಕ್ ಅವರಿಗೆ 2009ರಲ್ಲಿ ಪದ್ಮಶ್ರೀ ಹಾಗೂ ತಮಿಳುನಾಡು ಸರ್ಕಾರದಿಂದ 'ಕಲೈವನ್ನರ್' ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವಿವೇಕ್ ನಿಧನಕ್ಕೆ ವಿವಿಧ ಚಿತ್ರರಂಗಗಳ ದಿಗ್ಗಜರು, ನಟ-ನಟಿಯರು, ರಾಜಕೀಯ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೊರೊನಾ ಉಲ್ಬಣ ಹಿನ್ನೆಲೆ ಸಾಂಕೇತಿಕ ಕುಂಭಮೇಳ ನಡೆಸಲು ಮೋದಿ ಮನವಿ