ನಿರ್ದೇಶಕ ಜಯತೀರ್ಥ ಅವರ ಪ್ರಯತ್ನಕ್ಕೆ ಸಿನಿಪ್ರಿಯರು ಬೆನ್ನು ತಟ್ಟಿದ್ದಾರೆ. ಬೆಲ್ ಬಾಟಮ್ ಚಿತ್ರ ನೋಡಿದವರು ಚಪ್ಪಾಳೆ ಹೊಡೆದು, ಶಿಳ್ಳೆ ಹಾಕುತ್ತಿದ್ದಾರೆ. ಸಿನಿಮಾ ಎಲ್ಲಾ ವರ್ಗದವರನ್ನೂ ಮನರಂಜಿಸುತ್ತಿರುವುದಂತೂ ನಿಜ.
'ಬೆಲ್ ಬಾಟಂ' ಸಿನಿಮಾ ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡುತ್ತಿದೆ. ಫ್ಯಾಮಿಲಿ ಆಡಿಯನ್ಸ್ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದು, ವಾರಾಂತ್ಯದಲ್ಲಿ ಕುಟುಂಬ ಸಮೇತರಾಗಿ ಥಿಯೇಟರ್ಗೆ ಹೋಗಿ ಸಿನಿಮಾ ನೋಡಿ ಎಂಜಾಯ್ ಮಾಡ್ತಿದ್ದಾರೆ. ಅದಕ್ಕೆ ಕಾರಣ ರಿಷಭ್ಶೆಟ್ಟಿ ಅಭಿನಯ ಮತ್ತು ಮ್ಯಾನರಿಸಂ. ಇದರೊಂದಿಗೆ ಹರಿಪ್ರಿಯ ಅಭಿನಯ ಎಲ್ಲರ ಗಮನ ಸೆಳೆಯುತ್ತಿದೆ.
ಸಿನಿಮಾದಲ್ಲಿ ಪ್ರತಿ ಪಾತ್ರವೂ ನೆನಪಿನಲ್ಲಿ ಉಳಿಯುತ್ತದೆ. ಸಗಣಿ ಪಿಂಟೋ, ಮರಕುಟಿಕ, ಮೋಡಿ ನಂಜಪ್ಪ ವಿಚಿತ್ರ ಹೆಸರಿನ ಪಾತ್ರಗಳು ಸಿನಿಮಾದಲ್ಲಿವೆ. ಪಕ್ಕಾ ರೆಟ್ರೋ ಶೈಲಿಯಲ್ಲಿ ಇರದಿದ್ದರೂ ನಿಜಕ್ಕೂ 'ಬೆಲ್ ಬಾಟಂ' ಒಂದೊಳ್ಳೆ ಪ್ರಯತ್ನ. ರೆಗ್ಯುಲರ್ ಸಿನಿಮಾಗಳ ಮಧ್ಯೆ ಈ ಚಿತ್ರದಲ್ಲಿ ಬರುವ ಟ್ವಿಸ್ಟ್ ನಿಜಕ್ಕೂ ಪ್ರೇಕ್ಷರನ್ನು ಮೋಡಿ ಮಾಡಿದೆ. ಸಿನಿಮಾ 100 ದಿನಗಳು ಪೂರೈಸುವುದು ಖಂಡಿತ ಎನ್ನುತ್ತಾರೆ ಪ್ರೇಕ್ಷಕ ಪ್ರಭುಗಳು.