2018 ರಲ್ಲಿ ಬಿಡುಗಡೆಯಾದ ಡಿ. ಸತ್ಯಪ್ರಕಾಶ್ ನಿರ್ದೇಶನದ 'ಒಂದಲ್ಲಾ ಎರಡಲ್ಲಾ' ಸಿನಿಮಾಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಹಾಗೂ 66ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೂಡಾ ದೊರೆತಿದೆ. ಉಮಾಪತಿ ನಿರ್ಮಾಣದ ಈ ಚಿತ್ರಕ್ಕೆ ಎಲ್ಲೆಡೆಯಿಂದ ಬಹಳ ಮೆಚ್ಚುಗೆ ವ್ಯಕ್ತವಾಗಿತ್ತು.
ಇದೀಗ ಸಿನಿಮಾ ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಲಭ್ಯವಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಕೂಡಾ ಈ ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಕುಟುಂಬದವರೆಲ್ಲಾ ಕುಳಿತು ನೋಡಬಹುದಾದಂತ ಸಿನಿಮಾವನ್ನು ನಿರ್ದೇಶಕ ಸತ್ಯಪ್ರಕಾಶ್ ನೀಡಿದ್ದಾರೆ. ಇಡೀ ಚಿತ್ರತಂಡ ಉತ್ತಮವಾದ ಕೆಲಸ ಮಾಡಿದೆ. ನಮ್ಮ ಇಡೀ ಕುಟುಂಬ ಈ ಚಿತ್ರವನ್ನು ನೋಡಿ ಸಂತೋಷ ಪಟ್ಟಿದ್ದೇವೆ.
ಇಂತಹ ಚಿತ್ರಗಳನ್ನು ಜನರು ನೋಡುವ ಮೂಲಕ ಮತ್ತಷ್ಟು ಸದಭಿರುಚಿಯ ಚಿತ್ರಗಳು ಬರುವಂತೆ ಪ್ರೋತ್ಸಾಹ ನೀಡಬೇಕು. ರಾಷ್ಟ್ರಪ್ರಶಸ್ತಿ ಗಳಿಸಿರುವ ಈ ಚಿತ್ರವನ್ನು ಕನ್ನಡಕ್ಕೆ ಕೊಟ್ಟಿದ್ದಕ್ಕೆ ನಿರ್ದೇಶಕ ಸತ್ಯ ಪ್ರಕಾಶ್ ಅವರಿಗೆ ಡಾ. ವೀರೇಂದ್ರ ಹೆಗ್ಗಡೆಯವರು ಅಭಿನಂದನೆ ಸಲ್ಲಿಸಿದ್ದಾರೆ. 'ಒಂದಲ್ಲಾ ಎರಡಲ್ಲಾ' ಒಟಿಟಿಯಲ್ಲಿ ಬಿಡುಗಡೆ ಆಗಿ 5 ಲಕ್ಷಕ್ಕೂ ಹೆಚ್ಚು ಮಂದಿ ಚಿತ್ರವನ್ನು ವೀಕ್ಷಿಸಿದ್ದಾರೆ.