ನಿನ್ನೆ ದೇಶಾದ್ಯಂತ ಗೌರಿ-ಗಣೇಶ ಹಬ್ಬವನ್ನು ಒಟ್ಟಿಗೆ ಆಚರಿಸಿದ್ದಾರೆ. ಜನರು ವಿಘ್ನ ನಿವಾರಕ ಗಣಪ ಹಾಗೂ ಗೌರಿಯನ್ನು ಮನೆಗೆ ತಂದು ಅಲಂಕಾರ ಮಾಡಿ ಪೂಜಿಸಿದ್ದಾರೆ. ಬೀದಿ ಬೀದಿಗಳಲ್ಲಿ ಗಣೇಶನನ್ನು ಕೂರಿಸಿ ಸಂಭ್ರಮದಿಂದ ಹಬ್ಬ ಆಚರಿಸಿದ್ದಾರೆ. ಚಿಕ್ಕವರಿಂದ ಹಿಡಿದು ದೊಡ್ಡವರೂ ಕೂಡಾ ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
ಸಾಮಾನ್ಯ ಜನರು ಮಾತ್ರವಲ್ಲ ಸೆಲಬ್ರಿಟಿಗಳು ಕೂಡಾ ಈ ಹಬ್ಬದಲ್ಲಿ ಭಾಗಿಯಾಗಿದ್ದಾರೆ. ಕೆಲವರು ನಿನ್ನೆ ಸಂಜೆಯೇ ಗಣೇಶ ನಿಮಜ್ಜನ ಮಾಡಿದ್ದಾರೆ. ನಿನ್ನೆ ಸದಾಶಿವನಗರದಲ್ಲಿ ನಡೆದ ಗಣೇಶ ಹಬ್ಬದಲ್ಲಿ ದೊಡ್ಮನೆ ಮಕ್ಕಳು ಮೊಮ್ಮಕ್ಕಳು ಭಾಗಿಯಾಗಿದ್ದಾರೆ. ಸದಾಶಿವ ನಗರದ ಫ್ರೆಂಡ್ಸ್ ಅಸೋಸಿಯೇಷನ್ ತಂಡ ಆಯೋಜಿಸಿದ್ದ ಗಣಪತಿ ಉತ್ಸವದಲ್ಲಿ ಭಾಗಿಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ರಾಘವೇಂದ್ರ ರಾಜ್ ಕುಮಾರ್, ಹಾಗೂ ಮೊಮ್ಮಕ್ಕಳಾದ ಗುರುರಾಜ್ ಕುಮಾರ್, ವಿನಯ್ ರಾಜ್ ಕುಮಾರ್, ಧಿರೇನ್ ರಾಮ್ ಕುಮಾರ್ ಭಾಗಿಯಾಗಿದ್ದಾರೆ. ಉತ್ಸವದಲ್ಲಿ ತಮಟೆ ಸದ್ದಿಗೆ ಎಲ್ಲರೂ ಸಖತ್ ಸ್ಟೆಪ್ ಹಾಕಿದ್ದಾರೆ. ನೂರಾರು ಅಭಿಮಾನಿಗಳೊಂದಿಗೆ ಸಾಮಾನ್ಯರಂತೆ ಬೆರೆತು ಈ ಸೆಲಬ್ರಿಟಿಗಳು ಕುಣಿದು ಕುಪ್ಪಳಿಸಿದ್ದಾರೆ. ವಿಶೇಷ ಅಂದರೆ ರಾಘಣ್ಣ ಕೂಡಾ ಕುಣಿದಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳು ಕೂಡಾ ಖುಷಿಯಾಗಿದ್ದಾರೆ.