ಕನ್ನಡ ಚಿತ್ರರಂಗದಲ್ಲಿ, ನಿರ್ದೇಶಕ ಯೋಗರಾಜ್ ಭಟ್ ಬರೆಯುವ ಕೆಲವು ಸಾಹಿತ್ಯಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಎಂಬ ಮಾತಿದೆ. ಆದರೆ ನಿರ್ದೇಶಕ ಯೋಗರಾಜ್ ಭಟ್ ಗೆ, ಸಾಹಿತ್ಯದ ಕ್ರೇಜ್ ಹುಟ್ಟಲು ಇಬ್ಬರು ವ್ಯಕ್ತಿಗಳು ಕಾರಣವಂತೆ. ಅವರಲ್ಲಿ ಒಬ್ಬರು ಸಂಗೀತ ನಿರ್ದೇಶಕ, ಮತ್ತೊಬ್ಬರು ಸಾಹಿತಿ.
ಅವರು ಮತ್ತ್ಯಾರು ಅಲ್ಲ, ಮೆಲೋಡಿ ಹಾಡುಗಳ ಸಂಗೀತ ನಿರ್ದೇಶಕ ಮನೋಮೂರ್ತಿ ಹಾಗೂ ಪ್ರೀತಿ ಹಾಗೂ ಮಾಧುರ್ಯ ಹಾಡುಗಳ ರೂವಾರಿ ಜಯಂತ್ ಕಾಯ್ಕಿಣಿ ಎಂಬ ವಿಷಯವನನ್ನು ನಿರ್ದೇಶಕ ಯೋಗರಾಜ್ ಭಟ್ ರಿವೀಲ್ ಮಾಡಿದ್ದಾರೆ. 'ಸವರ್ಣದೀರ್ಘಸಂಧಿ' ಸಿನಿಮಾದ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮದ ವೇಳೆ, ಜಯಂತ್ ಕಾಯ್ಕಿಣಿ ಹಾಗೂ ಮನೋಮೂರ್ತಿ ಜೊತೆ ವೇದಿಕೆ ಹಂಚಿಕೊಂಡಿದ್ದ ಭಟ್ರು, ಸಾಹಿತ್ಯದ ಗೀಳು ಹುಟ್ಟಿದ ವಿಷಯ ಹಾಗೂ ತನ್ನ ಒಂಟಿತನವನ್ನು ದೂರ ಮಾಡಿದ್ದು ಮನೋಮೂರ್ತಿ ಸಂಗೀತ ಹಾಗೂ ಜಯಂತ್ ಕಾಯ್ಕಿಣಿ ಅವರ ಸಾಹಿತ್ಯ ಎಂಬ ಕುತೂಹಲಕಾರಿ ವಿಚಾರವನ್ನು ಬಿಚ್ಚಿಟ್ಟರು. ಇನ್ನು ಮಾಧುರ್ಯದಿಂದಲೇ ಎಲ್ಲಾ ರೀತಿಯ ಹಾಡುಗಳು ಹುಟ್ಟುತ್ತವೆ ಎಂಬುದಕ್ಕೆ ಮನೋಮೂರ್ತಿ ಅವರೇ ಮೂಲ ಕರ್ತೃ ಎಂದು ಭಟ್ಟರು ಅಭಿಪ್ರಾಯಪಟ್ಟರು. ಮಾಧುರ್ಯದ ಹಾಡುಗಳಿಗೆ ರಾಜಪಟ್ಟ ಕಟ್ಟಬೇಕು ಅಂದ್ರೆ ಅದು ಮನೋಮೂರ್ತಿಗೆ ಕಟ್ಟಬೇಕು ಎಂದು ನಿರ್ದೇಶಕ ಯೋಗರಾಜ್ ಭಟ್ ಮನೋಮೂರ್ತಿ ಹಾಡುಗಳ ಹಾಗೂ ಜಯಂತಿ ಕಾಯ್ಕಿಣಿ ಸಾಹಿತ್ಯದ ಬಗ್ಗೆ ಕೊಂಡಾಡಿದರು.