ಸೂಪರ್ ಹಿಟ್ ಸಿನಿಮಾ 'ನಟಸಾರ್ವಭೌಮ' ಬಳಿಕ ನಿರ್ದೇಶಕ ಪವನ್ ಒಡೆಯರ್ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. 'ರೇಮೊ' ಶೀರ್ಷಿಕೆಯ ಈ ಚಿತ್ರಕ್ಕೆ ಶಂಕರ ಮಠದಲ್ಲಿಂದು ಈ ಸಿನಿಮಾದ ಸ್ಕ್ರಿಪ್ಟ್ ಪೂಜೆ ನೆರವೇರಿತು. ಈ ವೇಳೆ ಹಾಜರಿದ್ದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜಕುಮಾರ್ ಈ ಸಿನಿಮಾಗೆ ಶುಭ ಹಾರೈಯಿಸಿದ್ರು.
'ರೋಗ್' ಚಿತ್ರದ ಮೂಲಕ ಸ್ಯಾಂಡಲ್ವುಡ್ ಹಾಗೂ ಟಾಲಿವುಡ್ ಸಿನಿಮಾರಂಗಕ್ಕೆ ಪರಿಚಯವಾದ ನಟ ಇಶಾನ್ ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಇದು ಅವರ ಎರಡನೇ ಸಿನಿಮಾ. ಇಶಾನ್ ಜೋಡಿಯಾಗಿ ಆಶಿಕಾ ರಂಗನಾಥ್ ಮಿಂಚಲಿದ್ದು, ಖ್ಯಾತ ನಟ ಶರತ್ ಕುಮರ್ ಅವರು ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.
ಈ ಚಿತ್ರಕ್ಕೆ ಪವನ್ ಒಡೆಯರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಲಿದ್ದು, ಜುಲೈನಲ್ಲಿ ಶೂಟಿಂಗ್ ಆರಂಭವಾಗಲಿದೆ. ಬೆಂಗಳೂರು, ಮೈಸೂರು, ಹೈದರಾಬಾದ್, ಲಂಡನ್, ಸಿಂಗಾಪುರ ಮುಂತಾದೆಡೆ ಚಿತ್ರಕ್ಕೆ 75 ದಿನಗಳ ಚಿತ್ರೀಕರಣ ನಡೆಯಲಿದೆಯಂತೆ.
ಚಿತ್ರದಲ್ಲಿ ಐದು ಹಾಡುಗಳಿರಲಿದ್ದು ಅರ್ಜುನ್ ಜನ್ಯಾ ಸಂಗೀತ ನೀಡುತ್ತಿದ್ದಾರೆ. ಎಸ್.ವೈದಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. 'ಒರಟ ಐ ಲವ್ ಯು','ಸ್ಕೂಲ್ ಮಾಸ್ಟರ್','ಜನುಮದ ಗೆಳತಿ','ವಜ್ರಕಾಯ' ಹಾಗೂ 'ದಿ ವಿಲನ್' ಸೇರಿದಂತೆ ಸಾಕಷ್ಟು ಯಶಸ್ವಿ ಚಿತ್ರಗಳ ನಿರ್ಮಾಪಕ ಸಿ.ಆರ್.ಮನೋಹರ್ ಈ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ.