ನಿಪುಣ ನಿರ್ದೇಶಕ, ಮಾತುಗಾರ, ಶಿಸ್ತಿನ ಸಿನಿಮಾ ನಿರ್ಮಾಪಕ ಕೂಡಾ ಆಗಿರುವ ದಯಾಳ್ ಪದ್ಮನಾಭನ್ ಮುಡಿಗೆ ಮತ್ತೊಂದು ಗೌರವ ಸಂದಾಯ ಆಗಿದೆ. ದಯಾಳ್ ನಿರ್ದೇಶಕನದ ಹೊಸ ಸಿನಿಮಾ ‘ರಂಗನಾಯಕಿ’ ಇಂಡಿಯನ್ ಪನೋರಮಾ ವಿಭಾಗಕ್ಕೆ ಆಯ್ಕೆ ಆಗಿದೆ. 50 ನೇ ಭಾರತೀಯ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರದರ್ಶನ ಆಗುತ್ತಿರುವ ಏಕೈಕ ಕನ್ನಡ ಸಿನಿಮಾ ಇದು.
ಐಎಫ್ಎಫ್ಐ (ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ) ಸಂಸ್ಥೆಗೆ ಇದು ಗೋಲ್ಡನ್ ಜ್ಯೂಬ್ಲಿ ವರ್ಷ. ಈ ಬಾರಿ 21 ವಿವಿಧ ಭಾಷೆಗಳ ಸಿನಿಮಾಗಳು ಪನೋರಮಾ ವಿಭಾಗಕ್ಕೆ ಆಯ್ಕೆ ಆಗಿವೆ. ಅದರಲ್ಲಿ ಅದಿತಿ ಪ್ರಭುದೇವ, ಎಂ.ಜಿ. ಶ್ರೀನಿವಾಸ್, ತ್ರಿವಿಕ್ರಮ್ ಅಭಿನಯದ ‘ರಂಗನಾಯಕಿ’ ಕೂಡಾ ಒಂದು. ಈ ಭಾರತೀಯ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ (ಐಎಫ್ಎಫ್ಐ-2019) ಮುಂದಿನ ತಿಂಗಳು ನವೆಂಬರ್ 20-28 ರವರೆಗೆ ಜರುಗಲಿದೆ. ಗೋವಾದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ 76 ದೇಶಗಳ ಸುಮಾರು 200 ಕ್ಕೂ ಹೆಚ್ಚು ಚಿತ್ರಗಳು ಪಾಲ್ಗೊಳ್ಳಲಿದೆ. ಎಸ್.ವಿ. ನಾರಾಯಣ್ ನಿರ್ಮಾಣದ ‘ರಂಗನಾಯಕಿ’ ಸಿನಿಮಾ ಕನ್ನಡ ರಾಜ್ಯೋತ್ಸವದಂದು ಅಂದರೆ ನವೆಂಬರ್ 1 ರಂದು ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ದಯಾಳ್ ಪದ್ಮನಾಭನ್ ಹೇಳಿದ್ದಾರೆ. ರಂಗನಾಯಕಿ ಬಿಡುಗಡೆ ವೇಳೆಗೆ ದಯಾಳ್ ಮುಂದಿನ ಸಿನಿಮಾ ಒಂಬತ್ತನೇ ದಿಕ್ಕು ಚಿತ್ರದ ಚಿತ್ರೀಕರಣ ಕೂಡಾ ಪೂರ್ಣಗೊಳ್ಳಲಿದೆ.