ದಬಾಂಗ್-3
ಈ ವರ್ಷ ಅನೇಕ ಡಬ್ಬಿಂಗ್ ಸಿನಿಮಾಗಳು ಪರಭಾಷೆಗಳಿಂದ ಬಂದು ನೆಲಕಚ್ಚಿವೆ. ಆದರೆ ಈ ಬಾರಿ ‘ದಬಾಂಗ್ -3’ ಇದಕ್ಕೆ ಹೊರತಾಗಿದೆ ಎನ್ನಬಹುದು. ಸುದೀಪ್ ಅವರಿಗೆ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಇರುವುದು ಹಾಗೂ ಚಿತ್ರದ ನಿರ್ದೇಶಕ ಪ್ರಭುದೇವ ಕನ್ನಡದವರೇ ಆಗಿರುವುದು ಥಿಯೇಟರ್ಗಳಿಗೆ ಜನರು ಬರುವುದು ಸುಲಭ ಎನ್ನಿಸುತ್ತಿದೆ. ಅಲ್ಲದೆ ಚಿತ್ರದ ಕೆಲವೊಂದು ಕನ್ನಡ ಡೈಲಾಗ್ಗಳನ್ನು ಸಲ್ಮಾನ್ ಖಾನ್ ಅವರಿಂದ ಮಾಡಿಸಿರುವುದು ಕೂಡಾ ವಿಶೇಷವೇ. ಸಲ್ಮಾನ್ ಖಾನ್ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಚುಲ್ಬುಲ್ ಪಾಂಡೆ ಪಾತ್ರದಲ್ಲಿ ನಟಿಸಿದ್ದರೆ, ಸುದೀಪ್ ಖಳನಾಯಕನಾಗಿ ಬಲ್ಲಿ ಸಿಂಗ್ ಪಾತ್ರದಲ್ಲಿ ಮಿಂಚಿದ್ದಾರೆ. ಕನ್ನಡ ವರ್ಷನ್ಗೆ ಗುರುದತ್ ಗಾಣಿಗ, ಎ.ಜೋಷಿ ಸಂಭಾಷಣೆ ರಚಿಸಿದ್ದಾರೆ. ಅನೂಪ್ ಭಂಡಾರಿ ಸಾಹಿತ್ಯ ಬರೆದಿದ್ದಾರೆ. ಸಾಜಿದ್-ವಾಜಿದ್ ಸಂಗೀತ ನೀಡಿದ್ದಾರೆ.
ಸಾರ್ವಜನಿಕರಿಗೆ ಸುವರ್ಣಾವಕಾಶ
ಪ್ರತಿಯೊಬ್ಬರ ಜೀವನದಲ್ಲೂ ಒಂದಾದರೊಂದು ವಿಷಯಕ್ಕೆ ಸುವರ್ಣಾವಕಾಶ ದೊರೆಯುತ್ತದೆ. ಅದನ್ನು ಸದುಪಯೋಗ ಮಾಡಿಕೊಳ್ಳಬೇಕು ಅಷ್ಟೆ. ಅಂತದ್ದೇ ಘಳಿಗೆ ನಾಯಕ ರಿಷಿ ಅವರಿಗೂ ಈ ಚಿತ್ರದಲ್ಲಿ ಬರುತ್ತದೆ. ವಿವಿಧ್ ಫಿಲ್ಮ್ಸ್ ಬ್ಯಾನರ್ ಅಡಿ ದೇವರಾಜ್, ಆರ್.ಪ್ರಶಾಂತ್ ರೆಡ್ಡಿ, ಎಸ್.ಜನಾರ್ಧನ್ ಚಿಕ್ಕಣ್ಣ ನಿರ್ಮಾಣ ಮಾಡಿರುವ 'ಸಾರ್ವಜನಿಕರಿಗೆ ಸುವರ್ಣಾವಕಾಶ' ಸಿನಿಮಾ ಇಂದು ಬಿಡುಗಡೆ ಆಗಿದೆ.
ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ, ಧನ್ಯಾ ಬಾಲಕೃಷ್ಣ, ಸಿದ್ದು ಮೂಲಿಮನೆ, ದತ್ತಣ್ಣ, ರಂಗಾಯಣ ರಘು, ಮಿತ್ರ, ಶಾಲಿನಿ, ಆನಂದ್ ತುಮಕೂರು ಹಾಗೂ ಇನ್ನಿತರರು ಚಿತ್ರದ ತಾರಾಗಣದಲ್ಲಿದ್ದಾರೆ. ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶನದ ಈ ಚಿತ್ರಕ್ಕೆ ಜನಾರ್ಧನ್ ಚಿಕ್ಕಣ್ಣ, ಹರಿಕೃಷ್ಣ ಸಂಭಾಷಣೆ ರಚಿಸಿದ್ದಾರೆ. ವಿಜ್ಞೇಶ್ ರಾಜ್ ಛಾಯಾಗ್ರಹಣ, ಮಿದುನ್ ಮುಕುಂದನ್ ಸಂಗೀತ, ಶಾಂತಕುಮಾರ್ ಸಂಕಲನ, ವರದರಾಜ್ ಕಲೆ, ಅಜರ್, ಶ್ರೀಧರ್ ನೃತ್ಯ, ಶಖಿ ಶರವನನ್ ಸಾಹಸ ಕಲೆ ಒದಗಿಸಿದ್ದಾರೆ.