ಮುಂಬೈ: ಕೋವಿಡ್-19 ಲಾಕ್ಡೌನ್ನಿಂದ ದೇಶದ ಮನರಂಜನಾ ಉದ್ಯಮಕ್ಕೆ ಭಾರಿ ಹೊಡೆತ ಬೀಳಲಿದೆ ಎಂದು ಹೇಳಲಾಗಿದೆ. ಸಿನಿಮಾ, ಮನರಂಜನಾ ಇವೆಂಟ್ಸ್ ಮತ್ತು ಥೀಮ್ ಪಾರ್ಕ್ಗಳಿಗೆ ಮುಂದಿನ ದಿನಗಳು ಭಾರಿ ಸಂಕಷ್ಟದಾಯಕವಾಗಿರಲಿದ್ದು, ಅದೇ ಸಮಯಕ್ಕೆ ಡಿಜಿಟಲ್ ಮೀಡಿಯಾ ಬೆಳವಣಿಗೆ ಹೊಂದಲಿದೆ ಎನ್ನಲಾಗಿದೆ.
ಈ ಕುರಿತು ಕೆಪಿಎಂಜಿ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಮನರಂಜನಾ ಮಾಧ್ಯಮದ ಬೆಳವಣಿಗೆ ಕುಂಠಿತವಾಗಲಿದೆ ಎಂದು ಹೇಳಿದೆ. ಲಾಕ್ಡೌನ್ ಅವಧಿಯಲ್ಲಿ ಟಿವಿ, ಗೇಮಿಂಗ್, ಡಿಜಿಟಲ್ ಹಾಗೂ ಓಟಿಟಿ ಪ್ಲಾಟ್ಫಾರ್ಮ್ಗಳು ಬೆಳವಣಿಗೆ ಹೊಂದುತ್ತಿವೆ. ಆದರೆ, ಮನೆಯಿಂದಾಚೆ ಹೋಗಿ ನೋಡಬೇಕಾದ ಸಿನಿಮಾ, ಇವೆಂಟ್ಸ್, ಥೀಮ್ ಪಾರ್ಕ್ ಮುಂತಾದುವು ಆಕರ್ಷಣೆ ಕಳೆದುಕೊಳ್ಳುತ್ತಿವೆ. ಸಾಮಾಜಿಕ ಅಂತರ ಕಾಪಾಡುವ ಕಾಳಜಿಯೂ ಈ ಪ್ಲಾಟ್ಫಾರ್ಮ್ಗಳ ಬೆಳವಣಿಗೆಗೆ ಮಾರಕವಾಗಲಿದೆ ಎಂದು ಕೆಪಿಎಂಜಿ ವರದಿಯಲ್ಲಿ ತಿಳಿಸಲಾಗಿದೆ.
ದೇಶದಲ್ಲಿ ಡಿಜಿಟಲ್ ಮಾಧ್ಯಮ ಎಷ್ಟೋ ಪಟ್ಟು ಬೆಳವಣಿಗೆ ಹೊಂದಲಿದೆ. ಲಾಕ್ಡೌನ್ ಅವಧಿಯಲ್ಲಿ ವಿಶೇಷವಾಗಿ ಓಟಿಟಿ ಪ್ಲಾಟ್ಫಾರ್ಮ್ ಗಮನಾರ್ಹ ಬೆಳವಣಿಗೆ ಹೊಂದುತ್ತಿದ್ದು, ಇದಕ್ಕಾಗಿ ಜನ ವ್ಯಯಿಸುತ್ತಿರುವ ಸಮಯ ಹೆಚ್ಚಾಗುತ್ತಿದೆ. ಹಾಗೆಯೇ ನಿರಂತರವಾಗಿ ಹೊಸ ಗ್ರಾಹಕರೂ ಸೇರ್ಪಡೆಯಾಗುತ್ತಿದ್ದಾರೆ.
ಪ್ರಸ್ತುತ ಜನತೆ ತಮ್ಮ ಮೊಬೈಲ್ಗಳ ಮೂಲಕವೇ ಹೆಚ್ಚಾಗಿ ಓಟಿಟಿ ಪ್ಲಾಟ್ಫಾರ್ಮ್ ಬಳಸುತ್ತಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಟಿವಿ ಸ್ಕ್ರೀನ್ ಮೂಲಕವೂ ಓಟಿಟಿ ಬಳಕೆ ಹೆಚ್ಚಾಗಲಿದೆ ಎಂದು ಕೆಪಿಎಂಜಿ ಹೇಳಿದೆ.