ಹಾಸ್ಯನಟ ಚಿಕ್ಕಣ್ಣ ನಾಯಕ ನಟನಾಗಿ ಪರಿಚಯವಾಗುತ್ತಿದ್ದಾರೆ. ಇದುವರೆಗೂ ಸಹಕಲಾವಿದನಾಗಿ ರಂಜಿಸುತ್ತಿದ್ದ ಈ ಪ್ರತಿಭೆ ಈಗ ಪೂರ್ಣಪ್ರಮಾಣದ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ.
ಹಾಗೇ ನೋಡಿದ್ರೆ ನಗೆ ನಟ ಚಿಕ್ಕಣ್ಣ ಈಗಾಗಲೇ ಹೀರೋ ಆಗಿ ಬೆಳ್ಳಿಪರದೆಯ ಮೇಲೆ ರಾರಾಜಿಸಬೇಕಿತ್ತು. ಈ ಹಿಂದೆ ಸಾಕಷ್ಟು ಜನ ನಿರ್ಮಾಪಕ - ನಿರ್ದೇಶಕರು ಇವರನ್ನು ನಾಯಕನನ್ನಾಗಿ ಮಾಡಲು ಮುಂದೆ ಬಂದಿದ್ದರು. ಆದರೆ, ಚಿಕ್ಕಣ್ಣನೇ ಮನಸ್ಸು ಮಾಡಿರಲಿಲ್ಲ. ಕೊನೆಗೂ ಅವರು ಚಿತ್ರವೊಂದಕ್ಕೆ ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ. ಈ ಚಿತ್ರಕ್ಕೆ ಮಂಜು ಮಾಂಡವ್ಯ ನಿರ್ದೇಶನ ಮಾಡಲಿದ್ದು, ಉಮಾಪತಿ ಫಿಲ್ಮ್ ಬ್ಯಾನರ್ನಡಿ ಈ ಸಿನಿಮಾ ರೆಡಿಯಾಗಲಿದೆ. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರ ಜತೆ ಮುಖ್ಯ ಪಾತ್ರವೊಂದನ್ನು ನಿಭಾಯಿಸಲಿದ್ದಾರೆ ಮಂಜು ಮಾಂಡವ್ಯ. ಚಿಕ್ಕಣ್ಣ ಜತೆ ಸಿನಿಮಾ ಮಾಡುತ್ತಿರುವ ವಿಚಾರವನ್ನು ಸ್ವತಃ ಮಂಜು ಮಾಂಡವ್ಯ ಅವರೇ ಖಚಿತಪಡಿಸಿದ್ದಾರೆ.
ಇನ್ನೂ ಹೆಸರಡಿದ ಈ ಚಿತ್ರ ಇದೇ ಅಕ್ಟೋಬರ್ನಲ್ಲಿ ಸೆಟ್ಟೇರಲಿದೆ. ಸದ್ಯ ಚಿಕ್ಕಣ್ಣ ತಮ್ಮಇತರ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಮಂಜು ಕೂಡ ತಮ್ಮ ಭರತ್ ಬಾಹುಬಲಿ ಚಿತ್ರದ ಬಿಡುಗಡೆಯಲ್ಲಿ ಗಮನ ಹರಿಸುತ್ತಿದ್ದಾರೆ. ಇತ್ತ ನಿರ್ಮಾಪಕ ಉಮಾಪತಿ ಕೂಡ ದರ್ಶನ್ ಅವರ ರಾಬರ್ಟ್ ಮೂವಿಯಲ್ಲಿ ತೊಡಗಿಕೊಂಡಿದ್ದಾರೆ.
ಇನ್ನು ಕನ್ನಡದಲ್ಲಿ ಕಾಮಿಡಿ ಕಲಾವಿದರು ನಟರಾಗಿ ಬಡ್ತಿ ಪಡೆಯುತ್ತಿರುವುದು ಇದೇ ಮೊದಲಲ್ಲ. ಈಗಾಗಲೇ ಶರಣ್, ಕೋಮಲ್ ಅವರು ಹೀರೋಗಳಾಗಿದ್ದಾರೆ. ಈಗ ಚಿಕ್ಕಣ್ಣ ಸರದಿ.