ಪ್ರಸ್ತುತ ದಿನಗಳಲ್ಲಿ ಕೊರೊನಾ ವಾರಿಯರ್ಗಳು ದೇಶ ಕಾಯುವ ಸೈನಿಕರಷ್ಟೇ ತಮ್ಮ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡುತ್ತಿದ್ದಾರೆ. ಜನರು ಕೊರೊನಾಗೆ ಹೆದರಿ ಮನೆಯಲ್ಲಿ ಇದ್ದರೂ ಪೌರಕಾರ್ಮಿಕರು, ಪೊಲೀಸರು ,ವೈದ್ಯರು , ಮಾಧ್ಯಮದವರು ಮಾತ್ರ ಎಂದಿನಂತೆ ಕೆಲಸ ಮಾಡುತ್ತಿದ್ದಾರೆ.
ಈಗಾಗಲೇ ದೇಶಾದ್ಯಂತ ಪೌರ ಕಾರ್ಮಿಕರನ್ನು ಬಹಳ ಕಡೆ ಸನ್ಮಾನಿಸಲಾಗಿದೆ. ಇದೀಗ ಸ್ಯಾಂಡಲ್ವುಡ್ ನಟ ಬಜಾರ್ ಖ್ಯಾತಿಯ ಧನ್ವೀರ್ ಗೌಡ ಕೂಡಾ ಪೌರ ಕಾರ್ಮಿಕರ ಪಾದಪೂಜೆ ಮಾಡಿ, ಸನ್ಮಾನಿಸಿ ಸರಳತೆ ಮೆರೆದಿದ್ದಾರೆ. 'ಸದ್ಯದ ಪರಿಸ್ಥಿತಿಯಲ್ಲಿ ಪೌರ ಕಾರ್ಮಿಕರನ್ನು ನಾವು ದೇವರಂತೆ ಕಾಣಬೇಕು. ನಮಗಾಗಿ ಅವರು ಬಹಳ ತ್ಯಾಗ ಮಾಡುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಯನ್ನು ನಾವು ಗೌರವಿಸಬೇಕು. ದೇವರು ಇಂತಹ ಶ್ರಮಜೀವಿಗಳಲ್ಲಿ ಇರುತ್ತಾರೆ. ಆದ್ದರಿಂದ ನಾನು ಅವರನ್ನು ಇಂದು ಸನ್ಮಾನ ಮಾಡಿದ್ದೇನೆ' ಎನ್ನುತ್ತಾರೆ ಧನ್ವೀರ್.

ಧನ್ವೀರ್ ಅವರ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರಿಂದ ಈ ನಟನಿಗೆ ಹಿರಿಯರ, ಶ್ರಮಜೀವಿಗಳ ಮೇಲೆ ಎಷ್ಟು ಗೌರವ ಇದೆ ಎಂಬುದು ತಿಳಿಯುತ್ತದೆ.