ಕಳೆದ 20 ವರ್ಷಗಳಿಂದ ಸಿನಿಮಾ ಪತ್ರಕರ್ತ ಆಗಿ ಅನೇಕ ಪ್ರಮುಖ ದಿನಪತ್ರಿಕೆಗಳಲ್ಲಿ ಮತ್ತು ರೂಪತಾರಾ ಮಾಸಿಕ ಸಿನಿಮಾ ಪತ್ರಿಕೆಯನ್ನು ಕೂಡಾ ಹೊರತರುತ್ತಿದ್ದ ಚೇತನ್ ನಾಡಿಗೇರ್ ಇದೀಗ 'ಸ್ಕ್ರೀನ್ ಶಾಟ್' ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಚೇತನ್ ನಾಡಿಗೇರ್ ಹಿರಿಯ ಸಾಹಿತಿ ನಾಡಿಗೇರ್ ಕೃಷ್ಣರಾಯರ ಮೊಮ್ಮಗ, ಇವರ ತಂದೆ ಶ್ರೀಕಾಂತ್ ಕೂಡಾ ಪತ್ರಕರ್ತರು.
ಚಿತ್ರರಂಗಕ್ಕೆ ಸಂಬಂಧಿಸಿದ ಕೆಲವೊಂದು ಅಪರೂಪದ ವಿಷಯಗಳನ್ನು ಚೇತನ್ ನಾಡಿಗೇರ್ ‘ಸ್ಕ್ರೀನ್ ಶಾಟ್’ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ. ಪುಸ್ತಕದಲ್ಲಿ ಲೇಖಕ ಪತ್ರಕರ್ತ ಜೋಗಿಯವರು ಮುನ್ನುಡಿ ಬರೆದು ಚೇತನ್ ರವರ ಬರಹಗಳನ್ನು ಮೆಚ್ಚಿದ್ದಾರೆ. ನಟ, ನಿರ್ದೇಶಕ ರಮೇಶ್ ಅರವಿಂದ್ ಬೆನ್ನುಡಿ ಬರೆದಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಬಾರಿ ಸಿನಿಮಾ ಆದ ಕಥೆ ಯಾವುದು...? ಅತಿ ಹೆಚ್ಚು ಕಾದಂಬರಿ ಆಧಾರಿತ ಚಿತ್ರಗಳಲ್ಲಿ ನಟಿಸಿದ ನಟ ಯಾರು..? ಭಾರತದ ಯಾವ ಸಾಹಿತಿಯ ಕೃತಿಗಳನ್ನಾಧರಿಸಿ ಅತಿ ಹೆಚ್ಚು ಸಿನಿಮಾಗಳಾಗಿವೆ? ಹೀಗೆ ಸುಮಾರು 25 ವಿಭಾಗಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಕುತೂಹಲಕಾರಿ ಅಂಶಗಳನ್ನು ಈ ಪುಸ್ತಕದಲ್ಲಿ ಚೇತನ್ ಅವರು ತಿಳಿಸಿದ್ದಾರೆ. ಪತ್ರಕರ್ತರಾದ ಸಾಹಿತಿ ಜೋಗಿ ಹಾಗೂ ವಿಕಾಸ್ ನೇಗಿಲೋಣಿ ಈ ಪುಸ್ತಕವನ್ನು ಬಿಡುಗಡೆಗೊಳಿಸಿದ್ದಾರೆ. ಸ್ನೇಹ ಬುಕ್ ಹೌಸ್, ಶ್ರೀನಗರ, ಈ ಪುಸ್ತಕವನ್ನು ಮಾರುಕಟ್ಟೆಗೆ ತಂದಿದ್ದು ಒಂದು ಪುಸ್ತಕಕ್ಕೆ 225 ರೂಪಾಯಿ ಬೆಲೆಯನ್ನು ನಿಗದಿಗೊಳಿಸಲಾಗಿದೆ.