ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನೆಯೇ ಮಂತ್ರಾಲಯ' ಧಾರಾವಾಹಿಯಲ್ಲಿ ಪುಟ್ಟ ಪಾತ್ರ ಮಾಡುವ ಮೂಲಕ ಕಿರುತೆರೆಗೆ ಕಾಲಿಟ್ಟ ಚಂದನಾ ಅನಂತಕೃಷ್ಣ ಮೊದಲ ಬಾರಿಗೆ ನಾಯಕಿಯಾಗಿದ್ದು 'ರಾಜ ರಾಣಿ' ಧಾರಾವಾಹಿಯ ಮೂಲಕ. ರಾಜ ರಾಣಿ ಧಾರಾವಾಹಿಯಲ್ಲಿ ನಾಯಕಿ ಚುಕ್ಕಿ ಆಲಿಯಾಸ್ ಎಡವಟ್ಟು ರಾಣಿಯಾಗಿ ನಟಿಸಿ ಮೋಡಿ ಮಾಡಿದ್ದ ಚಂದನಾ ಅನಂತಕೃಷ್ಣಗೆ ಚುಕ್ಕಿ ಪಾತ್ರ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಟ್ಟಿತ್ತು. ಆದ್ರೆ ಇವರಿಗೆ ದೊಡ್ಡ ಬ್ರೇಕ್ ನೀಡಿದ್ದು ಬಿಗ್‌ಬಾಸ್ ಕಾರ್ಯಕ್ರಮ. ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಚಂದನಾ ಮುದ್ದಾದ ಮಾತು, ನಗು, ನಡವಳಿಕೆ ಮೂಲಕ ಮನೆ ಮಾತಾಗಿದ್ದರು.
ದೊಡ್ಮನೆಯಿಂದ ಹೊರಬಂದ ಬಳಿಕ ನಿರೂಪಕಿಯಾಗಿ ಕಾಣಿಸಿಕೊಂಡ ಈ ಚೆಲುವೆ ಅಲ್ಲಿಯೂ ಸೈ ಎನಿಸಿಕೊಂಡಿದ್ದರು. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸಿಂಗಿಂಗ್ ಶೋ ಹಾಡು ಕರ್ನಾಟಕದ ನಿರೂಪಕಿಯಾಗಿ ಚಂದನಾ ಅನಂತಕೃಷ್ಣ ಕಾಣಿಸಿಕೊಂಡಿದ್ದರು. ಮೊದಲ ಬಾರಿಗೆ ನಿರೂಪಕಿಯಾಗಿ ಯಶಸ್ವಿ ಪಡೆದ ಚಂದನಾ ಇದೀಗ ಮಗದೊಮ್ಮೆ ಕಿರುತೆರೆಗೆ ಕಾಲಿಡುತ್ತಿದ್ದಾರೆ.
ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಹೊಚ್ಚ ಹೊಸ ಧಾರಾವಾಹಿ ಹೂಮಳೆಯಲ್ಲಿ ನಾಯಕಿ ಲಹರಿಯಾಗಿ ಚಂದನಾ ಅಭಿನಯಿಸಲಿದ್ದಾರೆ. ಈ ಸಂತಸದ ವಿಚಾರವನ್ನು ಚಂದನಾ ಅವರೇ ಶೇರ್ ಮಾಡಿಕೊಂಡಿದ್ದಾರೆ.
"ನಮಸ್ತೆ ಕರ್ನಾಟಕ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿರುವ ಹೊಸ ಧಾರಾವಾಹಿ ಹೂಮಳೆ ಮೂಲಕ ನಾನು ನಿಮ್ಮ ಮುಂದೆ ಬರಲಿದ್ದೇನೆ. ಹೊಸ ಪಾತ್ರದ ಮೂಲಕ ನಿಮ್ಮ ಮುಂದೆ ಬರುತ್ತಿರುವುದಕ್ಕೆ ನನಗೆ ನಿಜವಾಗಿಯೂ ಸಂತಸವಾಗುತ್ತಿದೆ. ಜೊತೆಗೆ ನನ್ನ ಹೊಸ ಪಾತ್ರವನ್ನು ನೀವು ಕೂಡಾ ಇಷ್ಟಪಡಲಿದ್ದೀರಿ. ಹೂಮಳೆಯ ತಂಡದ ಭಾಗವಾಗಿರುವುದಕ್ಕೆ ನನಗೆ ನಿಜವಾಗಿಯೂ ಖುಷಿಯಾಗುತ್ತಿದೆ" ಎಂದು ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ ಚಂದನಾ.
ಇದರ ಜೊತೆಗೆ "ನಿಮ್ಮೆಲ್ಲರ ಪ್ರತಿಕ್ರಿಯೆಗೆ ನಾನು ಕಾಯುತ್ತಿದ್ದೇನೆ. ಮಾತ್ರವಲ್ಲ ನಿಮ್ಮ ಪ್ರೋತ್ಸಾಹ ಹೀಗೆ ಇರಲಿ ಮತ್ತು ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಎಂದಿಗೂ ಹೀಗೆಯೇ ಇರಲಿ" ಎಂದು ಚಂದನಾ ಬರೆದುಕೊಂಡಿದ್ದಾರೆ.
ಈಗಾಗಲೇ ಧಾರಾವಾಹಿಯ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವೀಕ್ಷಕರು ಚಂದನಾ ಅವರನ್ನು ತೆರೆ ಮೇಲೆ ನೋಡಲು ಕಾತುರರಾಗಿದ್ದಾರೆ.