ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾದ ಸುಮಧುರ ಹಾಡು 'ಒಂದು ಮಳೆಬಿಲ್ಲು ಒಂದು ಮಳೆ ಮೋಡ' ಹಾಡಿನ ಸಾಲಿನಿಂದ 'ಮಳೆಬಿಲ್ಲು' ಎಂಬ ಸಿನಿಮಾ ತಯಾರಾಗಿದ್ದು ಶೀಘ್ರದಲ್ಲೇ ಬಿಡುಗಡೆ ಕೂಡಾ ಆಗುತ್ತಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಕೂಡಾ ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ. ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ , ಫಿಲ್ಮ್ ಚೇಂಬರ್ ಅಧ್ಯಕ್ಷ ಚಿನ್ನೇಗೌಡ್ರು ಹಾಗೂ ಕಾರ್ಯದರ್ಶಿ ಭಾಮಾ ಹರೀಶ್ ಅಗಮಿಸಿ ಟ್ರೇಲರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಅಂತರ್ಜಾಲದ ಮೂಲಕ ನಿರ್ದೇಶನ ಕಲಿತಿರುವ ನಾಗರಾಜ್ ಹಿರಿಯೂರು ಚಿತ್ರಕ್ಕೆ ಕಥೆ ಚಿತ್ರಕಥೆ, ಸಂಭಾಷಣೆ, ಹಾಗೂ ಸಾಹಿತ್ಯ ಬರೆದು ನಿರ್ದೇಶಿಸಿದ್ದಾರೆ. ಅಣ್ಣನ ಸಿನಿಮಾ ಕ್ರೇಜ್ಗೆ ತಮ್ಮನೇ ನಿರ್ಮಾಪಕನಾಗಿ ಬಂಡವಾಳ ಹೂಡಿದ್ದಾರೆ. ಚಿತ್ರದ ಕಥೆ ವಿಚಾರಕ್ಕೆ ಬಂದ್ರೆ ನಿರ್ದೇಶಕ ನಾಗರಾಜ್ ಹೆಣ್ಣನ್ನು ಮಳೆಬಿಲ್ಲಿಗೆ ಹೋಲಿಸಿದ್ದಾರೆ. ಗಂಡಿನ ಜೀವನದಲ್ಲಿ ಹೆಣ್ಣು ಇಲ್ಲದಿದ್ದರೆ ಅವರ ಜೀವನ ಖಾಲಿಯಾಗಿರುತ್ತದೆ ಎಂದು ನಾಗರಾಜ್ ಹೇಳಿದ್ದಾರೆ.
ಇನ್ನು 'ಕ' ಚಿತ್ರದ ಶರತ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು ಡಬಲ್ ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಮೂವರು ನಾಯಕಿಯರ ಜೊತೆ ಡ್ಯೂಯೆಟ್ ಹಾಡಿದ್ದಾರೆ. 'ಕೆಮಿಸ್ಟ್ರಿ ಆಫ್ ಕರಿಯಪ್ಪ' ಖ್ಯಾತಿಯ ಸಂಜನಾ ಆನಂದ್, ನಯನ ಹಾಗೂ ನವನಟಿ ಈ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಬರೋಬ್ಬರಿ ಹತ್ತು ಹಾಡುಗಳಿದ್ದು ಆರ್.ಎಸ್. ಗಣೇಶ್ ನಾರಾಯಣ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಿರ್ದೇಶಕ ನಾಗರಾಜ್ ಹಿರಿಯೂರು 'ಮಳೆಬಿಲ್ಲು' ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಪ್ರೇಮಲೋಕ ಸೃಷ್ಟಿಸಲು ಹೊರಟಿದ್ದಾರೆ.