ಕನ್ನಡ ಚಿತ್ರರಂಗದ ಐಕಾನ್ ಡಾ.ರಾಜ್ ಕುಮಾರ್. ಬದುಕಿನುದ್ದಕ್ಕೂ ಅವರು ಪಾಲಿಸಿದ್ದ ಸರಳತೆ ಹಾಗೂ ಅಮೋಘ ಅಭಿನಯದಿಂದಾಗಿ ಇವತ್ತಿಗೂ ಕೋಟ್ಯಂತರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿದ್ದಾರೆ. ಅಣ್ಣಾವ್ರು ಮರಣದ ನಂತರ, ತಮ್ಮ ಎರಡು ಕಣ್ಣುಗಳನ್ನ ದಾನ ಮಾಡುವ ಮೂಲಕ, ನೇತ್ರಾದಾನ ಮಹಾದಾನ ಎಂಬ ಮಹಾನ್ ಕಾರ್ಯಕ್ಕೆ ಅಡಿಗಲ್ಲು ಹಾಕಿದ ಬಂಗಾರದ ಮನುಷ್ಯ. ಈಗ ಇದೇ ಹಾದಿಯಲ್ಲಿ ಅವರ ಹಿರಿಯ ಮಗ ಡಾ. ಶಿವರಾಜ್ ಕುಮಾರ್ ನಡೆದಿದ್ದಾರೆ. ತಮ್ಮ ಎರಡು ಕಣ್ಣುಗಳನ್ನ ದಾನ ಮಾಡಲು ನಿರ್ಧರಿಸಿದ್ದಾರೆ.
ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟ ಶಿವರಾಜ್‌ಕುಮಾರ್, ನೇತ್ರ ದಾನ ಮಾಡುವ ಬಗ್ಗೆ ಘೋಷಣೆ ಮಾಡುವ ಮೂಲಕ, ಅದೆಷ್ಟೋ ಜನರಿಗೆ ಮಾದರಿಯಾಗಿದ್ದಾರೆ. 1994ರಲ್ಲಿ ಡಾ.ರಾಜ್ ಕುಮಾರ್ ನೇತ್ರ ಬ್ಯಾಂಕ್ ಸ್ಥಾಪನೆಗೊಂಡಿತ್ತು.
ಈ ನೇತ್ರಬ್ಯಾಂಕ್‌ನ ಅಂದು ಸ್ವತಃ ಡಾ.ರಾಜ್ ಕುಮಾರ್ ಉದ್ಘಾಟಿಸಿದ್ದರು. ಈಗ ಅದೇ ನೇತ್ರದಾನ ಬ್ಯಾಂಕ್ಗೆ ಶಿವರಾಜ್ ಕುಮಾರ್ ತಮ್ಮ ಕಣ್ಣುಗಳನ್ನ ದಾನ ಮಾಡುವುದಾಗಿ ಹೇಳಿದ್ದಾರೆ. ಇತ್ತೀಚೆಗಷ್ಟೇ ಕಣ್ಣಿನ ಬಗ್ಗೆ ಕಥೆ ಆಧರಿಸಿರೋ ಅಕ್ಷಿ ಸಿನಿಮಾಕ್ಕೆ ನ್ಯಾಷಿನಲ್ ಆವಾರ್ಡ್ ಬಂದಿತ್ತು.
ಈ ಅಕ್ಷಿ ಚಿತ್ರತಂಡ ನಾರಾಯಣ ನೇತ್ರಾಲಯದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ಬಂದಿದ್ದ ಸೆಂಚುರಿ ಸ್ಟಾರ್, ತಂದೆಯಂತೆ ತಾವು ಕಣ್ಣುಗಳನ್ನ ದಾನ ಮಾಡುವುದಾಗಿ ಘೋಷಿಸಿದ್ದಾರೆ. ಇನ್ನು, 2006ರಲ್ಲಿ ವರನಟ ಡಾ.ರಾಜ್ ಕುಮಾರ್ ಮರಣದ ನಂತರ ಅವರ ಕಣ್ಣುಗಳನ್ನ ನಾರಾಯಣ ನೇತ್ರಾಲಯದಲ್ಲೇ ದಾನ ಮಾಡಲಾಗಿತ್ತು.