'ಬಿಗ್ ಬಾಸ್ ಹಿಂದಿ ಸೀಸನ್ 14' ಪ್ರೇಕ್ಷಕರನ್ನು ರಂಜಿಸುತ್ತಿದೆ. ಈ ಬಾರಿಯೂ ಹಲವು ಮನಸ್ಥಿತಿವುಳ್ಳ ವ್ಯಕ್ತಿಗಳು ಬಿಗ್ ಬಾಸ್ ಮನೆಯನ್ನು ಪ್ರವೇಶಿಸಿದ್ದಾರೆ. ಅದರಲ್ಲೂ ನಟಿ ರಾಖಿ ಸಾವಂತ್ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಬಿಗ್ ಬಾಸ್ ಮನೆಯಲ್ಲಿ ಅವರ ನಡವಳಿಕೆ ಎಲ್ಲರ ಗಮನ ಸೆಳೆಯುತ್ತಿದೆ.
ಸದ್ಯ ಬಿಗ್ ಬಾಸ್ ಸ್ಪರ್ಧಿಗಳನ್ನು ನೋಡಲು ದೊಡ್ಮನೆಗೆ ಅವರವರ ಕುಟುಂಬದವರು ಬರುತ್ತಿದ್ದಾರೆ. ರಾಖಿ ಸಾವಂತ್ ತನ್ನ ಮನೆಯವರನ್ನು ಸ್ವಾಗತಿಸಲು ಸಜ್ಜಾಗುತ್ತಿದ್ದರು. ಆ ಸಂದರ್ಭದಲ್ಲಿ ಸೀರೆ ಉಟ್ಟುಕೊಂಡರೆ ಸೂಕ್ತ ಎಂದು ಸ್ವತಃ ತಾವೇ ಸೀರೆ ಉಟ್ಟುಕೊಳ್ಳುವ ಬದಲಿಗೆ ದೊಡ್ಮನೆಯಲ್ಲಿರುವ ಅಭಿನವ್ ಶುಕ್ಲಾಗೆ ಮನವಿ ಮಾಡಿಕೊಂಡರು. ಈ ಮೂಲಕ ಕೂಡ ರಾಖಿ ಅಚ್ಚರಿ ಮೂಡಿಸಿದ್ದಾರೆ.
ಆಶ್ಚರ್ಯ ಏನಂದ್ರೆ ಅಭಿನವ್‌ಗೆ ಈಗಾಗಲೇ ಮದುವೆಯಾಗಿದೆ. ಅವರ ಪತ್ನಿ ರುಬೀನಾ ದಿಲೈಕ್ ಕೂಡ ಇದೇ ಸೀಸನ್‌ನಲ್ಲಿ ಸ್ಪರ್ಧಿಯಾಗಿದ್ದಾರೆ. ರುಬೀನಾ ದಿಲೈಕ್ ಎದುರೇ ರಾಖಿಗೆ ಸೀರೆ ಉಡಿಸಲು ಅಭಿನವ್ ಒಪ್ಪಿಕೊಂಡರು. ಇದು ಕೂಡ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಈ ಪತಿ-ಪತ್ನಿಯ ಬಾಂಧವ್ಯಕ್ಕೆ ಕನ್ನಡಿ ಹಿಡಿಯುವಂತಹ ಘಟನೆ ಬಿಗ್ ಬಾಸ್ ಮನೆಯಲ್ಲಿ ಈ ಹಿಂದೆ ನಡೆದಿತ್ತು. ಅಭಿನವ್‌ಗೆ ಸಲ್ಮಾನ್ ಖಾನ್ ಅವರು 'ಲಗೇಜು' ಎಂದು ಅವಹೇಳನ ಮಾಡಿದಾಗ, ಅವರ ಪತ್ನಿ ರುಬೀನಾ ಅವರು ಸಲ್ಮಾನ್ ಖಾನ್ ವಿರುದ್ಧವೇ ಗರಂ ಆಗಿದ್ದರು.
ಸದ್ಯ ಬಿಗ್ ಬಾಸ್ ಫಿನಾಲೆಗೆ ದಿನಗಣನೆ ಶುರುವಾಗಿದೆ. ಕಳೆದ ಸೀಸನ್‌ಗಳ ಸ್ಪರ್ಧಿಗಳು ಕೂಡ ಈ ಬಾರಿಯ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ.