2009 ರಲ್ಲಿ ಬಿಡುಗಡೆಯಾದ 'ಅವತಾರ್' ಸಿನಿಮಾವನ್ನು ಇದೀಗ 'ಅವೆಂಜರ್ಸ್' ಹಿಂದಿಕ್ಕಿದೆ. ಇದುವರೆಗೂ 'ಅವತಾರ್' ಸಿನಿಮಾ ಅತ್ಯಧಿಕ ವಸೂಲಿ ಮಾಡಿದ ಸಿನಿಮಾಗಳಲ್ಲಿ ಅಗ್ರಸ್ಥಾನಲ್ಲಿತ್ತು. ಆದರೆ ಇದೀಗ ಆ ದಾಖಲೆಯನ್ನು 'ಅವೆಂಜರ್ಸ್:ಎಂಡ್ಗೇಮ್' ಸರಿಗಟ್ಟಿದೆ.
ಜೇಮ್ಸ್ ಕೆಮರೂನ್ ನಿರ್ದೇಶನದ 'ಅವತಾರ್' ವಿಶ್ವಾದ್ಯಂತ ಸುಮಾರು 2.78 ಬಿಲಿಯನ್ ಡಾಲರ್ ದೋಚಿದೆ. 10 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಸಿನಿಮಾ ಲಾಭದ ವಿಷಯದಲ್ಲಿ ಇದುವರೆಗೂ ಮೊದಲ ಸ್ಥಾನದಲ್ಲಿತ್ತು. ಇದುವರೆಗೂ ಯಾವ ಸಿನಿಮಾ ಕೂಡಾ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಆಂಥೋನಿ ರುಸ್ಸೋ, ಜೋಸೆಫ್ ರುಸ್ಸೋ ನಿರ್ದೇಶನದ 'ಅವೆಂಜರ್ಸ್:ಎಂಡ್ಗೇಮ್' ಈ ದಾಖಲೆಯನ್ನು ಮುರಿಯುವ ಹಾದಿಯಲ್ಲಿದೆ ಎಂದು ಸಿನಿಮಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಸಿನಿಮಾ ಆಗಲೇ 2.79 ಬಿಲಿಯನ್ ಡಾಲರ್ ವಸೂಲಿ ಮಾಡಿದೆ. ಹೆಚ್ಚಾಗಿ ಚೀನಾ ಹಾಗೂ ಭಾರತದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ.
ಚಿತ್ರದ ಕಲೆಕ್ಷನ್ ಮತ್ತಷ್ಟು ಹೆಚ್ಚು ಮಾಡುವ ಉದ್ದೇಶದಿಂದ ಚಿತ್ರ ನಿರ್ಮಾಣ ಸಂಸ್ಥೆ ಮಾರ್ವೆಲ್ ಸ್ಟುಡಿಯೋಸ್, ಇನ್ನೂ ಹೆಚ್ಚಿನ ಸನ್ನಿವೇಶಗಳನ್ನು ಜೋಡಿಸಿ ಕಳೆದ ತಿಂಗಳು 28 ರಂದು ಮತ್ತೆ ಸಿನಿಮಾವನ್ನು ಎರಡನೇ ಬಾರಿ ಬಿಡುಗಡೆಗೊಳಿಸಿತ್ತು. ಊಹಿಸಿದಂತೆಯೇ 'ಅವೆಂಜರ್ಸ್' ಇದೀಗ ಕಲೆಕ್ಷನ್ ವಿಷಯದಲ್ಲಿ ಮೊದಲ ಸ್ಥಾನದಲ್ಲಿದೆ. 'ಅವತಾರ್' ಎರಡನೇ ಸ್ಥಾನದಲ್ಲಿದ್ದು 'ಟೈಟಾನಿಕ್' ಮೂರನೇ ಸ್ಥಾನದಲ್ಲಿದೆ.