ಪರಭಾಷೆಗಳಿಂದ ಕನ್ನಡಕ್ಕೆ ಅನೇಕ ವಿಲನ್ ಪಾತ್ರಧಾರಿಗಳು ಬಂದಿದ್ದಾರೆ. ಅವರಲ್ಲಿ ಜನರು ಇಷ್ಟಪಟ್ಟು ಪ್ರೋತ್ಸಾಹಿಸುವುದು ಕೆಲವರನ್ನು ಮಾತ್ರ. ಈ ಸಾಲಿನಲ್ಲಿರುವ ಖ್ಯಾತ ವಿಲನ್ ಎಂದರೆ ಆಶಿಷ್ ವಿದ್ಯಾರ್ಥಿ. ಕನ್ನಡ ಚಿತ್ರರಂಗದಲ್ಲಿ ಇವರು ದೊಡ್ಡ ಸ್ಥಾನಮಾನವನನ್ನೇ ಪಡೆದಿದ್ದಾರೆ.
ಆದರೆ ಆಶಿಷ್ ವಿದ್ಯಾರ್ಥಿ ಅಮರೀಶ್ ಪುರಿ, ಓಂ ಪುರಿ ಅವರಂತೆ ಕನ್ನಡ ಕಲಿತು ತಮ್ಮ ಪಾತ್ರಕ್ಕೆ ಡಬ್ ಮಾಡಲು ಸಾಧ್ಯವಾಗಲಿಲ್ಲ. ವಿಶೇಷ ಎಂದರೆ ಇಂದು ಆಶಿಷ್ ವಿದ್ಯಾರ್ಥಿ ಜನ್ಮದಿನ. ಇವರು ಕನ್ನಡಕ್ಕೆ ಎಂಟ್ರಿಯಾಗಿದ್ದು 1986 ರಲ್ಲಿ ಬಿಡುಗಡೆಯಾದ ಡಾ. ಶಿವರಾಜಕುಮಾರ್ ಅವರ ಮೊದಲ ಚಿತ್ರ 'ಆನಂದ್' ನಿಂದ. ಇದು ಆಶಿಷ್ ವಿದ್ಯಾರ್ಥಿ ಅವರ ಮೊದಲ ಸಿನಿಮಾ ಕೂಡಾ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ,ಮರಾಠಿ, ಒಡಿಶಾ ಸೇರಿ ಬಹಳಷ್ಟು ಸಿನಿಮಾಗಳಲ್ಲಿ ನಟಿಸುವ ಮೂಲಕ ಆಶಿಷ್ ವಿದ್ಯಾರ್ಥಿ ಖ್ಯಾತಿಯ ಉತ್ತುಂಗಕ್ಕೇರಿದ್ದಾರೆ.
ಆಶಿಷ್ ವಿದ್ಯಾರ್ಥಿ ಕೇರಳದಲ್ಲಿ ಹುಟ್ಟಿ, ದೆಹಲಿಯ ಹಿಂದೂ ಕಾಲೇಜ್ನಲ್ಲಿ ಇತಿಹಾಸ ವಿಭಾಗದಲ್ಲಿ ಪದವಿ ಪಡೆದು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ವಿದ್ಯಾರ್ಥಿ ಆಗಿ ಸಂಭವ್ ರಂಗಭೂಮಿ ತಂಡ ಸೇರಿಕೊಂಡರು. ನಂತರ ಆ್ಯಕ್ಟ್ ಒನ್ ತಂಡಕ್ಕೆ ಸೇರಿಕೊಂಡು ಕೆಲವೇ ದಿನಗಳಲ್ಲಿ ಚಿತ್ರರಂಗದಲ್ಲಿ ಬ್ಯುಸಿ ಆದರು.
ಕನ್ನಡದಲ್ಲಿ ಎ.ಕೆ 47, ಸಾಹಸಸಿಂಹ ವಿಷ್ಣುವರ್ಧನ್ ಅವರ ಕೋಟಿಗೊಬ್ಬ , ವಂದೇಮಾತರಂ, ನಂದಿ, ಸೈನಿಕ, ದುರ್ಗಿ, ತುಂಟ, ಆಕಾಶ್, ನಮ್ಮಣ್ಣ, ತಂದೆಗೆ ತಕ್ಕ ಮಗ, ಸುಂಟರಗಾಳಿ, ಯೋಧ, ಆ ದಿನಗಳು, ಪರಮೇಶಿ ಪಾನ್ವಾಲಾ, ಜೊತೆಗಾರ, ಭಾಗ್ಯದ ಬಳೆಗಾರ, ಬಚ್ಚನ್, ಮಾರ್ಚ್ 22, ಪಟಾಕಿ, ಸಿದ್ದಾರ್ಥ್ ಹಾಗೂ ಇನ್ನಿತರ ಸಿನಿಮಾಗಳಲ್ಲಿ ಆಶಿಷ್ ವಿದ್ಯಾರ್ಥಿ ಅಭಿನಯಿಸಿದ್ದಾರೆ. ಆದರೆ ಇತ್ತೀಚೆಗೆ ಅವರು ಯಾವುದೇ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ.
![Ashish Vidyarthi celebrating is 59th birthday](https://etvbharatimages.akamaized.net/etvbharat/prod-images/ashish-vidyaarthi-actor-of-11-languages1592539979017-93_1906email_1592539990_469.jpg)
ಒಟ್ಟಿನಲ್ಲಿ ಆಶಿಷ್ ವಿದ್ಯಾರ್ಥಿ ಕನ್ನಡ ಚಿತ್ರರಂಗದ ಮೂಲಕ ಕರಿಯರ್ ಆರಂಭಿಸಿ ಇಂದು ಭಾರತೀಯ ಚಿತ್ರರಂಗದಲ್ಲೇ ಹೆಸರು ವಾಸಿಯಾಗಿರುವುದು ಹೆಮ್ಮೆಯ ವಿಚಾರ. ಅಭಿನಯಕ್ಕಾಗಿ ಇದುವರೆಗೂ ಆಶಿಷ್ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆಶಿಷ್ ವಿದ್ಯಾರ್ಥಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು ಹಾಗೂ ಇಡೀ ಭಾರತೀಯ ಚಿತ್ರರಂಗವೇ ಶುಭಾಶಯ ಕೋರಿದೆ.