ಕರ್ನಾಟಕದ 'ಸಿಂಗಂ' ಎಂದೇ ಖ್ಯಾತಿಯಾಗಿರುವ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅಭಿನಯದ 'ಅರಬ್ಬೀ' ಚಿತ್ರ ಸಿಂಪಲ್ಲಾಗಿ ಸೆಟ್ಟೇರಿದೆ. ಬೆಂಗಳೂರಿನ ಬಸವನಗುಡಿ ಶ್ರೀ ರಾಘವೇಂದ್ರ ಮಠದಲ್ಲಿ 'ಅರಬ್ಬೀ' ಚಿತ್ರದ ಮುಹೂರ್ತ ಮುಗಿಸಿರುವ ಚಿತ್ರತಂಡ ಶೂಟಿಂಗ್ ಆರಂಭಿಸುವ ಸಿದ್ಧತೆಯಲ್ಲಿದೆ.
'ಅರಬ್ಬೀ' ಚಿತ್ರದಲ್ಲಿ ಪ್ಯಾರಾ ಸ್ವಿಮ್ಮರ್ ವಿಶ್ವಾಸ್ ನಾಯಕನಾಗಿ ನಟಿಸುತ್ತಿದ್ದಾರೆ. ವಿಶೇಷ ಅಂದರೆ ಚಿತ್ರದಲ್ಲಿ ಕೂಡಾ ವಿಶ್ವಾಸ್ ಪ್ಯಾರಾ ಸ್ವಿಮ್ಮರ್ ಪಾತ್ರದಲ್ಲೇ ನಟಿಸುತ್ತಿದ್ದಾರೆ. ಈ ಚಿತ್ರವನ್ನು ನವ ನಿರ್ದೇಶಕ ರಾಜಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷಚೇತನರಿಗೆ ಬೇಕಾಗಿರುವುದು ಅವಕಾಶವೇ ಹೊರತು ಅನುಕಂಪವಲ್ಲ ಎಂಬ ಅಂಶ ಇಟ್ಟುಕೊಂಡು ನಿರ್ದೇಶಕ ರಾಜಕುಮಾರ್ ಈ ಕಥೆ ಹೆಣೆದಿದ್ದಾರೆ.
ಚಿತ್ರದಲ್ಲಿ ನಾಯಕಿಯಾಗಿ 'ಜೋಡಿಹಕ್ಕಿ' ಖ್ಯಾತಿಯ ಚೈತ್ರಾರಾವ್ ನಟಿಸಿದ್ದಾರೆ. ವಿಶೇಷ ಎಂದರೆ ಚಿತ್ರದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸ್ವಿಮ್ಮಿಂಗ್ ಕೋಚ್ ಆಗಿ ನಟಿಸುತ್ತಿದ್ದು ಚಿತ್ರದಲ್ಲಿ ನಟಿಸಲು ಹಣ ಪಡೆದಿಲ್ಲವಂತೆ. ಚೇತನ್ ಸಿ.ಎಸ್. ಈ ಸಿನಿಮಾಗೆ ಬಂಡವಾಳ ಹೂಡಿದ್ದು ಹಿಂದಿ, ಬೋಜ್ ಪುರಿ, ಹಾಗೂ ಮಣಿಪುರಿ ಭಾಷೆಯಲ್ಲಿ ಚಿತ್ರ ತಯಾರಾಗಲಿದೆ. ಚಿತ್ರಕ್ಕೆ ಆಯುಷ್ ಮಂಜು ಸಂಗೀತ ನೀಡುತ್ತಿದ್ದು ಬೆಂಗಳೂರು ಹಾಗೂ ಅರಬ್ಬೀ ಸಮುದ್ರದ ತೀರದಲ್ಲಿ ಚಿತ್ರದ ಶೂಟಿಂಗ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.