ಕನ್ನಡ ಚಿತ್ರರಂಗದ ಯುವರತ್ನ ಅಂತಾ ಕರೆಯಿಸಿಕೊಂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನ ಇಡೀ ಕರುನಾಡಿಗೆ ದೊಡ್ಡ ನೋವುಂಟು ಮಾಡಿದೆ. ಆದರೆ, ಪುನೀತ್ ರಾಜ್ ಕುಮಾರ್ ಮಾಡಿರೋ ಸಮಾಜಮುಖಿ ಕೆಲಸಗಳ ಆಧಾರದ ಮೇಲೆ, ರಾಜ್ಯದ ಸಾಕಷ್ಟು ಹಳ್ಳಿ, ಊರುಗಳ ಕೆಲ ರಸ್ತೆಗಳಿಗೆ ಮತ್ತು ವೃತ್ತಗಳಿಗೆ ಪುನೀತ್ ರಾಜ್ ಕುಮಾರ್ ಹೆಸರನ್ನ ಇಡಲಾಗಿದೆ.
ಸದ್ಯ ಬೆಂಗಳೂರಿನಲ್ಲಿ ನಾಯಂಡಹಳ್ಳಿಯಿಂದ ಬನ್ನೇರುಘಟ್ಟದವರೆಗಿನ ರಸ್ತೆಗೆ ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಇಡಲು ಬಿಬಿಎಂಪಿ ನಿರ್ಧರಿಸಿದೆ. ಈ ಬಗ್ಗೆ ಆಕ್ಷೇಪಣೆಗಳಿದ್ದರೆ ಜನವರಿ 29ರೊಳಗೆ ಸಲ್ಲಿಸುವಂತೆ ಬಿಬಿಎಂಪಿ ಪ್ರತಿಕಾ ಪ್ರಕಟಣೆ ಹೊರಡಿಸಿತ್ತು.
ಇದೇ ವಿಚಾರವಾಗಿ ದೇವರ ಮಗ ಅಭಿಷೇಕ್ ಅಂಬರೀಷ್ ಟ್ರಸ್ಟ್ ವತಿಯ ಅಭಿಮಾನಿಗಳು, ಬಿಬಿಎಂಪಿ ಕಚೇರಿಗೆ ತೆರಳಿ, ಪುನೀತ್ ರಾಜ್‌ಕುಮಾರ್ ಅವರಂತೆಯೇ ಅಂಬರೀಶ್ ಅವರಿಗೂ ಗೌರವ ಸಲ್ಲಿಕೆಯಾಗಬೇಕು. ನಾಯಂಡಹಳ್ಳಿಯಿಂದ ಬನ್ನೇರುಘಟ್ಟದವರೆಗಿನ ರಸ್ತೆಗೆ ಅಂಬರೀಶ್ ಅವರ ಹೆಸರನ್ನಿಡಬೇಕು ಎಂದು ಅಂಬರೀಶ್ ಅಭಿಮಾನಿಗಳು ಆಗ್ರಹಿಸಿದ್ದಾರೆ.
ನಾಯಂಡಳ್ಳಿ ರಸ್ತೆಗೆ 1994-95ರಲ್ಲೇ ಅಂಬರೀಶ್ ಅವರ ಹೆಸರುಡುವಂತೆ ಮನವಿ ಮಾಡಲಾಗಿದೆ. ಕೆಲವು ರಾಜಕಾರಣಿಗಳ ಕುತಂತ್ರದಿಂದ ಆ ಕೆಲಸ ಇನ್ನು ಆಗಿಲ್ಲ. ಆದ್ರೆ, ಈಗ ಆ ರಸ್ತೆಗೆ ಬಿಬಿಎಂಪಿ ಪುನೀತ್ ರಾಜ್ ಕುಮಾರ್ ಅವರ ಹೆಸರಿಡಲು ಮುಂದಾಗಿದ್ದು, ಇದು ರೆಬಲ್ ಸ್ಟಾರ್ ಅಂಬರೀಷ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಅಕ್ಷೇಪಣೆ ಸಲ್ಲಿಸುವವರು, ಈ ತಿಂಗಳ 29ರ ಒಳಗೆ ಆಕ್ಷೇಪಣೆ ಸಲ್ಲಿಸುವಂತೆ ಬಿಬಿಎಂಪಿ ತಿಳಿಸಿತ್ತು, ಇದನ್ನು ಗಮನಿಸಿ ನಾವು ಇಂದು ಬಿಬಿಎಂಪಿಯಲ್ಲಿ ಆಕ್ಷೇಪಣೆ ಸಲ್ಲಿಸಿದ್ದೇವೆ. ಇನ್ನು ಅಂಬರೀಶಣ್ಣ ನಿಧನರಾಗಿ 3 ವರ್ಷಗಳಾಯ್ತು. ಇದುವರೆಗೂ ಸರ್ಕಾರ ಅವರಿಗೆ ಒಂದು ಕಾರ್ಯ ಕ್ರಮದ ಮೂಲಕ ಗೌರವ ಸಲ್ಲಿಸಿಲ್ಲ. ಬೆಂಗಳೂರಿನಲ್ಲಿ ಅಂಬರೀಶಣ್ಣನ ಒಂದು ಪ್ರತಿಮೆ ನಿರ್ಮಾಣ ಮಾಡಿಲ್ಲ. ಅಲ್ಲದೆ ಯಾವುದೇ ರಸ್ತೆಯಾಗಲಿ, ಪಾರ್ಕ್‌ಗಾಗಲಿ ಬಿಬಿಎಂಪಿ ಅಂಬರೀಶಣ್ಣನ ಹೆಸರಿಟ್ಟಿಲ್ಲ ಅಂತಾ ಅಂಬರೀಷ್ ಅಭಿಮಾನಿಗಳು ತಮ್ಮ ಆಕ್ರೋಶವನ್ನ ಹೊರ ಹಾಕಿದರು.
ಅಂಬರೀಶ್ ಅವರ ಹೆಸರಿನಲ್ಲಿ ರಸ್ತೆಗಳಿಗೆ ನಾಮಕರಣ ಮಾಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳಿಗೆ ಒತ್ತಾಯಿಸಿ, ಹೋರಾಟ ಮಾಡುವುದಾಗಿ ಈ ಹಿಂದೆಯೂ ಅಭಿಮಾನಿಗಳು ಹೇಳಿದ್ದರು. ಆಗ ಪ್ರತಿಕ್ರಿಯೆ ನೀಡಿದ್ದ ಸುಮಲತಾ ಅಂಬರೀಶ್, ಯಾವುದನ್ನೇ ಆಗಲಿ ಕೇಳಿ ಪಡೆಯುವುದು ಸರಿಯಲ್ಲ ಅಂತಾ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಈಗ ಮತ್ತೆ ಅಂಬರೀಷ್ ಅಭಿಮಾನಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ