ಕೊರೊನಾ ವೈರಸ್ ಕಾಟದಿಂದ ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಹಾಗೂ ಸ್ಟಾರ್ ನಿರ್ದೇಶಕ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರದಿಂದ ಬಾಲಿವುಡ್ ಬೆಡಗಿ ಆಲಿಯಾ ಭಟ್ ಹೊರಬಂದಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.
ಆರ್‌ಆರ್‌ಆರ್ ಚಿತ್ರದ ಚಿತ್ರೀಕರಣ ಶೇ.75ರಷ್ಟು ಮುಗಿದಿದೆ. ಈ ಚಿತ್ರದಲ್ಲಿ ಆಲಿಯಾ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂದು ಹೇಳಲಾಗಿತ್ತು. ಆಲಿಯಾ ಭಟ್ ಇದೇ ತಿಂಗಳು ಚಿತ್ರೀಕರಣ ಪಾಲ್ಗೊಳ್ಳಲು ಪ್ಲಾನ್ ಕೂಡ ಮಾಡಲಾಗಿತ್ತು. ಇದಕ್ಕಾಗಿ ಎಷ್ಟೇ ಬ್ಯುಸಿಯಾದರೂ ಪರವಾಗಿಲ್ಲ ಎಂದು ಆಲಿಯಾ ಡೇಟ್ ಕೊಟ್ಟಿದ್ದರು.
ಕೊರೊನಾ ವೈರಸ್ ಈಗ ಶೂಟಿಂಗ್ ಮುಂದೂಡಿರುವ ಪರಿಣಾಮ ಮತ್ತೆ ಸಿನಿಮಾಗೆ ಡೇಟ್ ಕೊಡಲು ಆಗುತ್ತಿಲ್ಲ. ಈ ಸಿನಿಮಾದ ನಂತರ ಸದಕ್-2, ಬ್ರಹ್ಮಾಸ್ತ್ರ ಮತ್ತು ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನದಲ್ಲಿ ಗಂಗೂಬಾಯಿ ಕಥಿಯಾವಾಡಿ ಸಿನಿಮಾ ಸೇರಿದಂತೆ ಸಾಲು ಸಾಲು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಈ ಚಿತ್ರಗಳ ನಡುವೆ ಮತ್ತೆ ಆರ್‌ಆರ್‌ಆರ್ ಚಿತ್ರಕ್ಕೆ ಡೇಟ್ ಕೊಡಲು ಸಾಧ್ಯವಿಲ್ಲ ಎಂದು ಅಲಿಯಾ ಹೇಳಿದ್ದಾರೆ ಎನ್ನಲಾಗಿದೆ.
ಆಲಿಯಾ ಭಟ್ ಆರ್ಆರ್ಆರ್ನಿಂದ ಹೊರ ಬಂದರೆ ಸಿನಿಮಾದ ಮೇಲೆ ಪರಿಣಾಮ ಬೀರಲಿದೆ. ಅಲ್ಲದೆ, ಮತ್ತೆ ಆಲಿಯಾ ಸ್ಥಾನಕ್ಕೆ ಮತ್ತೊಬ್ಬರನ್ನು ಹುಡುಕಬೇಕಾಗಿದೆ. ಹೀಗಾಗಿ ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಮುಂದಿನ ವರ್ಷ ಜನವರಿ 8 ಕ್ಕೆ ಚಿತ್ರ ಬಿಡುಗಡೆ ಮಾಡಲಿದ್ದೇವೆ ಎಂದು ಚಿತ್ರತಂಡ ಈಗಾಗಲೇ ಹೇಳಿದೆ. ಈಗ ಆ ದಿನಾಂಕಕ್ಕೂ ಸಿನಿಮಾ ಬಿಡುಗಡೆಯಾಗುವುದು ಕಷ್ಟ ಎಂಬ ಮಾತುಗಳು ಕೇಳಿಬರುತ್ತಿವೆ. ಕೊರೊನಾ ಭೀತಿ ಹೆಚ್ಚಾದ ಹಿನ್ನೆಲೆಯಲ್ಲಿ ಎಲ್ಲಾ ಸಿನಿಮಾಗಳ ಚಿತ್ರೀಕರಣ ರದ್ದುಗೊಳಿಸಲಾಗಿದೆ.
ಅಂದಾಜು 400 ಕೋಟಿ ಬಜೆಟ್‍ನಲ್ಲಿ ತಯಾರಾಗುತ್ತಿರುವ ಆರ್‌ಆರ್‌ಆರ್ ಸಿನಿಮಾದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಅವರ ಪಾತ್ರದಲ್ಲಿ ರಾಮ್ ಚರಣ್ ಮತ್ತು ಕೊಮರಾಮ್ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್‍ಟಿಆರ್ ಕಾಣಿಸಿಕೊಳ್ಳಲಿದ್ದಾರೆ.