ನೆಲಮಂಗಲ: ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ. ಲೀಲಾವತಿಯವರು ಕಷ್ಟದಲ್ಲಿದ್ದವರಿಗೆ ಸ್ಪಂದಿಸುವ ಗುಣದವರು. ಕಳೆದ ಲಾಕ್ ಡೌನ್ ಸಮಯದಲ್ಲಿ ಜೂನಿಯರ್ ನಟರಿಗೆ ಆಹಾರ ಕಿಟ್ ಗಳನ್ನ ವಿತರಿಸಿದ್ದ ಅವರು, ಈಗಲೂ 200 ಮಂದಿ ಜೂನಿಯರ್ ಕಲಾವಿದರಿಗೆ ಆಹಾರ ಕಿಟ್ ವಿತರಿಸಿ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.
ತಾಲೂಕಿನ ಸೋಲದೇವನಹಳ್ಳಿಯ ತೋಟದ ಮನೆಯಲ್ಲಿ ವಾಸವಾಗಿರುವ ಲೀಲಾವತಿ ಅವರು ತಮ್ಮ ಸಂಪಾದನೆಯ ಸ್ಪಲ್ಪ ಭಾಗವನ್ನು ಸಮಾಜಕ್ಕೆ ಮೀಸಲಿಡುತ್ತಿದ್ದಾರೆ. ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವ ಹಿರಿಯ ನಟಿ, ಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ಚಾಚುತ್ತಾರೆ. ಸಿನಿಮಾ ರಂಗಕ್ಕೆ ಕಷ್ಟ ಬಂದಾಗ ಮೊದಲು ಸಹಾಯಕ್ಕೆ ಸಹೃದಯಿಗಳಲ್ಲಿ ಲೀಲಾವತಿ ಕೂಡಾ ಒಬ್ಬರು.
ಸುಮನಹಳ್ಳಿಯಲ್ಲಿ 200 ಸಹ ಕಲಾವಿದರಿಗೆ ಆಹಾರ ಕಿಟ್ ವಿತರಣೆ ಮಾಡಿ ತಮ್ಮ ಕೈಲಾದ ಸಹಾಯವನ್ನು ಚಿತ್ರರಂಗಕ್ಕೆ ಮಾಡಿದರು. ನಂತರ ಭಗವಂತ ಎಲ್ಲರಿಗೂ ಆರೋಗ್ಯ, ಆಯುಷ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸಿದರು.
ಅಮ್ಮನ ಆಸೆಗೆ ಮಗನ ಸಾಥ್
ನಮ್ಮ ತಾಯಿ ಸಹ ಜೂನಿಯರ್ ನಟಿಯಾಗಿದ್ದವರು. ಆ ಸಮಯದಲ್ಲಿ ಅವರು ಪಟ್ಟ ಕಷ್ಟ ನೆನೆದು ಇಂದು ಜೂನಿಯರ್ ನಟರಿಗೆ ಸಹಾಯ ಮಾಡುವ ಇಚ್ಛೆ ಹೊಂದಿದ್ದರು. ಅವರ ಆಸೆಯಂತೆ ಆಹಾರ ಕಿಟ್ ವಿತರಣೆ ಮಾಡಿ ಸಿನಿಮಾ ರಂಗಕ್ಕೆ ದುಡಿದವರಿಗೆ ಅಳಿಲು ಸೇವೆ ಮಾಡುತ್ತಿದ್ದೇವೆ ಎಂದು ನಟ ವಿನೋದ್ ರಾಜ್ ತಿಳಿಸಿದರು.