ಬೆಂಗಳೂರು: ಮತದಾನ ಮಾಡದೇ ನಮ್ಮ ಕರ್ತವ್ಯ ಮರೆತು, ಪರರು ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎಂದು ಪ್ರಶ್ನೆ ಮಾಡುವುದು ಸರಿಯಲ್ಲ. ಹಾಗಾಗಿ ಮೊದಲು ನಾವು ನಮ್ಮ ಕರ್ತವ್ಯ ನಿರ್ವಹಿಸೋಣ, ನಂತರ ಧೈರ್ಯವಾಗಿ ಪ್ರಶ್ನಿಸೋಣ ಎಂದು ನಟ ಯಶ್ ಮತದಾರರಿಗೆ ಕರೆ ನೀಡಿದ್ರು.
ಹೊಸಕೆರೆ ಹಳ್ಳಿಯ ಸರ್ಕಾರಿ ಶಾಲೆಯ ಮತಗಟ್ಟೆ1 ರಲ್ಲಿ ವೋಟು ಹಾಕಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕರ್ತವ್ಯ ಮರೆತು ಮತ್ತೊಬ್ಬರ ಬಗ್ಗೆ ಬೆರಳು ತೋರಿಸುವುದು ಸರಿಯಲ್ಲ. ಹಾಗಾಗಿ ಮೊದಲು ಮತ ಹಾಕಬೇಕು. ನಂತರ ಅವರಿಂದ ಕೆಲಸ ಮಾಡಿಸಬೇಕು ಎಂದರು.
ಈ ಬಾರಿ ಮತದಾನದ ಪ್ರಮಾಣ ಉತ್ತಮವಾಗಿದೆ. ಬಿಸಿಲು ಏರುವ ಮುನ್ನ ಸಾಕಷ್ಟು ಸಂಖ್ಯೆಯಲ್ಲಿ ಜನರು ಮತ ಚಲಾಯಿಸಿದ್ದಾರೆ. ಸಂಜೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಯಾರೂ ಕೂಡ ಮತದಾನದಿಂದ ದೂರ ಉಳಿಯದೇ ಹಕ್ಕು ಚಲಾಯಿಸಿ ಎಂದು ಜಾಗೃತಿ ಮೂಡಿಸಿದರು.
ಮೊದಲ ಹಂತದಲ್ಲಿ ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡಿದ್ದು, ಎರಡನೇ ಹಂತದಲ್ಲಿ ಎಲ್ಲಿಯೂ ಪ್ರಚಾರ ಮಾಡುತ್ತಿಲ್ಲ ಎಂದು ಯಶ್ ಸ್ಪಷ್ಟಪಡಿಸಿದರು.
ಸೆಲ್ಫಿಗೆ ಮುಗಿಬಿದ್ದ ಮತದಾರರು:
ವೋಟು ಹಾಕಲು ಬಂದ ನಟ ಯಶ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಯುವ ಮತದಾರರು ಮುಗಿಬಿದ್ದರು. ಮತ ಚಲಾಯಿಸಲು ಸರದಿ ಸಾಲಿನಲ್ಲಿ ನಿಂತಿದ್ದ ಯಶ್ ಅಭಿಮಾನಿಗಳು ಹಾಗೂ ಯುವಕರು ಸಾಲು ತೊರೆದು ಸೆಲ್ಫಿಗಾಗಿ ಯಶ್ ಹಿಂದೆ ಓಡಿದರು. ನಾ ಮುಂದು ತಾ ಮುಂದು ಎಂದು ಸೆಲ್ಫಿಗಳನ್ನು ತೆಗೆದುಕೊಂಡರು.