ಅಯ್ಯೋ ಇದ್ಯಾಕಪ್ಪ ಕೈಯಲ್ಲಿ ಸಾಲು ಸಾಲು ಸಿನಿಮಾ ಇದ್ರು, ನಟನೆ ಮಾಡೋದು ಬಿಟ್ಟು "ಬ್ರಹ್ಮಚಾರಿ" ಸತೀಶ ರೈತ ಆಗಿಬಿಟ್ರಾ ಅಂತ ತಿಳ್ಕೊಂಡ್ರೆ, ನಿಮ್ಮ ಕಲ್ಪನೆ ತಪ್ಪಾಗುತ್ತೆ. ಯಾಕಂದ್ರೆ, ಅಯೋಗ್ಯ ಸತೀಶ ಹೊಲ ಹಸನು ಮಾಡ್ತಿರೋದೇನೋ ನಿಜ. ಅದ್ರೆ, ಅವರು ಸಿನಿಮಾಕ್ಕಾಗಿ ರೈತ ಆಗಿಲ್ಲ. ಬದಲಿಗೆ ನಿಜವಾಗಿಯೇ ಉಳುಮೆ ಮಾಡಿದ್ದಾರೆ.
ಇತ್ತೀಚೆಗಷ್ಟೇ ಖಾಸಗಿ ಕೆಲಸದ ಸಲುವಾಗಿ ಮುದ್ರಣ ಕಾಶಿ ಗದಗಕ್ಕೆ ಭೇಟಿ ನೀಡಿದ್ದ ಕ್ವಾಟ್ಲೇ ಸತೀಶ ಪ್ರಯಾಣ ಮಾಡೋವಾಗ ರಸ್ತೆ ಬದಿಯಲ್ಲಿ ರೈತರೊಬ್ಬರು ಬಿತ್ತುವ ಸಲುವಾಗಿ ಹೊಲವನ್ನು ಹಸನು ಮಾಡುತ್ತಿದ್ದುದನ್ನು ನೋಡಿದರಂತೆ. ಆಗ ಕೂಡಲೇ ಕಾರಿಂದ ಇಳಿದು ನೇರವಾಗಿ ಹೊಲಕ್ಕೆ ಹೋಗಿ ಜೊಡೆತ್ತುಗಳನ್ನು ಹಿಡಿದು, ಜಮೀನು ಉಳುಮೆ ಮಾಡಿದ್ದಾರೆ. ನೀನಾಸಂ ಸತೀಶ್ ಯಾವ ರೈತನಿಗೂ ಕಮ್ಮಿ ಇಲ್ಲ ಎನ್ನುವ ರೀತಿ ಉಳುಮೆ ಮಾಡಿದ್ದಾರೆ. ಸ್ಯಾಂಡಲ್ವುಡ್ ನಟನ ಈ ಉಳುಮೆಯನ್ನು ನೋಡಿದ ಗದಗ ರೈತರು ಪುಲ್ ಖುಷ್ ಆಗಿದ್ದಾರೆ.