ಈ ಕೊರೊನಾ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಸಿನಿಮಾ ಕಾರ್ಮಿಕರು, ತಂತ್ರಜ್ಞರು, ಹಿರಿಯ ಪೋಷಕ ಕಲಾವಿದರಿಗೆ ನಟ ಉಪೇಂದ್ರ ತಮ್ಮ ಕೈಲಾದ ಸಹಾಯವನ್ನ ಮಾಡುತ್ತಿದ್ದಾರೆ. ಉಪೇಂದ್ರರ ಸಮಾಜ ಸೇವೆಗೆ ಕೆಲ ಸಿನಿಮಾ ತಾರೆಯರು ಹಾಗೂ ನೂರಾರು ದಾನಿಗಳು ಸಾಥ್ ನೀಡಿದ್ದಾರೆ.
ಉಪೇಂದ್ರ ಸಹೋದರ ಸುಧೀಂದ್ರ ಕೆಲ ದಿನಗಳ ಹಿಂದೆ ಅರ್ಚಕರು, ಪುರೋಹಿತರು ಹಾಗೂ ಅಡುಗೆ ಕೆಲಸ ಮಾಡುವ ಸುಮಾರು 200ಕ್ಕೂ ಹೆಚ್ಚು ಬ್ರಾಹ್ಮಣರಿಗೆ ದಿನಸಿ ಕಿಟ್ ಮತ್ತು ತರಕಾರಿಗಳನ್ನು ನೀಡಿದ್ದರು. ಇದು ನಟ ಹಾಗೂ ಸಾಮಾಜಿಕ ಹೋರಾಟಗಾರ ‘ಆ ದಿನಗಳು’ ಚಿತ್ರದ ನಾಯಕ ಚೇತನ್ ಕೆಂಗಣ್ಣಿಗೆ ಗುರಿಯಾಗಿದೆ.
ಈ ಬಗ್ಗೆ ಚೇತನ್ ತಮ್ಮ ಫೇಸ್‌ಬುಕ್‌ನಲ್ಲಿ, ಸಮಾಜಸೇವೆಯ ಹೆಸರಿನಲ್ಲಿ ಸ್ವಜಾತಿ ಮೆರೆಯುವುದಕ್ಕಿಂತ ನಿಜವಾಗಿ ತುಳಿತಕ್ಕೆ ಒಳಗಾದವರಿಗೆ ಮತ್ತು ದುರ್ಬಲರಿಗೆ ಸಹಾಯ ಹಸ್ತ ಚಾಚುವುದೇ ನಿಜವಾದ ಸಮಾಜಸೇವೆ ಅಂತಾ ತಮ್ಮ ಅಸಮಾಧಾನ ಹೊರಹಾಕಿದ್ದರು.
ನಟ ಉಪೇಂದ್ರ ಹಾಗೂ ಚೇತನ್ ನಡುವಿನ ಜಾತಿ ವಿಷಯ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಆರೋಪ ಪ್ರತ್ಯಾರೋಪ ಮಾಡಿದ್ದಾರೆ. ಈ ಸಂಬಂಧ ನಟ ಚೇತನ್ ಮತ್ತೊಂದು ವಿಡಿಯೋ ಮೂಲಕ ಉಪೇಂದ್ರಗೆ ಟಾಂಗ್ ನೀಡಿದ್ದಾರೆ.
ಬಡತನದ ಹೆಸರಲ್ಲಿ ಜಾತಿಯನ್ನ ಸೇರಿಸಬೇಡಿ. ಮೊದಲು ಸಂವಿಧಾನವನ್ನ ಓದಿಕೊಳ್ಳಿ ಅಂತಾ ಚೇತನ್ ಉಪೇಂದ್ರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಜಾತಿಗೆ ನೂರಾರು ವರ್ಷಗಳ ಚರಿತ್ರೆ ಇದೆ. ಆದರೆ ಬಡತನದ ಹೆಸರಲ್ಲಿ ಜಾತಿ ಸೇರಿಸುವುದು ಸರಿ ಅಲ್ಲ. ನೀವು ಪ್ರಜಾಕೀಯ ಅಂತಾ ಪಕ್ಷ ಕಟ್ಟೋದಿಕ್ಕೆ ಹೊರಟ್ಟಿದ್ದೀರಾ. ಮೊದಲು ನಮ್ಮ ಮಣ್ಣಿನ ಮಹಾನ್ ಸಾಧಕರ ಬಗ್ಗೆ ತಿಳಿದುಕೊಳ್ಳಿ ಅಂತಾ ನಟ ಚೇತನ್ ಹೇಳಿದ್ದಾರೆ.