ಬೆಂಗಳೂರು: ಡಿವಿಜಿ ರಸ್ತೆ, ಜಯನಗರ, ಕತ್ರಿಗುಪ್ಪೆ, ಆರ್.ಆರ್.ನಗರ, ಮಲ್ಲೇಶ್ವರಂ, ಬಸವೇಶ್ವರನಗರದಲ್ಲಿ ಮನೆ ಮಾತಾಗಿರುವ ಭಾಸ್ಕರ್ಸ್ ಅವರ 'ಮನೆ ಹೋಳಿಗೆ'ಯ ಘಮಲು ಈಗ ವಿಜಯನಗರದ ಆರ್.ಪಿ.ಸಿ ಲೇಔಟ್‍ಗೂ ಪಸರಿಸಲಿದೆ.
ಡಿವಿಜಿ ರಸ್ತೆಗೆ ಹೋದವರು ಭಾಸ್ಕರ್ಸ್ ಅವರ ಮನೆ ಹೋಳಿಗೆ ರುಚಿ ನೋಡದವರೇ ಇಲ್ಲ. ಅಲ್ಲಿ ಪ್ರಖ್ಯಾತಿಗೊಂಡ ಮನೆ ಹೋಳಿಗೆ ಮಂಗಳೂರು, ಹುಬ್ಬಳ್ಳಿಗೂ ತಲುಪಿದೆ. ಶುಕ್ರವಾರ ಆರ್.ಪಿ.ಸಿ ಲೇಔಟ್‍ನಲ್ಲಿ ಆರಂಭಗೊಂಡಿದೆ.
ನಟಿ ಅದಿತಿ ಪ್ರಭುದೇವ, ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ, ಆ ದಿನಗಳು ಚೇತನ್ ಆಗಮಿಸಿ ಬಾದಾಮಿ ಹೋಳಿಗೆ ಸವಿದರು. ಹೋಳಿಗೆ ಮನೆ ವಿಶೇಷ ಆಯಾ ಕಾಲಕ್ಕೆ ತಕ್ಕಂತೆ ಸಿಗುವ ತಾಜಾ ಹಣ್ಣುಗಳನ್ನು ಬಳಸಿ ಮಾಡುವ ಹೋಳಿಗೆ ಇಲ್ಲಿನ ವಿಶೇಷ. ಪೈನಾಪಲ್, ಮಾವಿನಹಣ್ಣು, ಹಲಸಿನಹಣ್ಣಿನ ಹೋಳಿಗೆಗಳು ಸಿಗುತ್ತವೆ. ಬೇಳೆ ಹಾಗೂ ಕಾಯಿ ಹೋಳಿಗೆ ಎಲ್ಲಾ ಕಾಲದಲ್ಲೂ ಸಿಗುತ್ತದೆ. 35ಕ್ಕೂ ಹೆಚ್ಚು ಭಿನ್ನವಾದ ಹೋಳಿಗೆಗಳು ಇಲ್ಲಿ ತಯಾರಾಗುತ್ತವೆ.
ನಟಿ ಅದಿತಿ ಪ್ರಭುದೇವ ಮಾತನಾಡಿ, "ಹೋಳಿಗೆ ಅಂದ್ರೆ ಯಾರಿಗೆ ಇಷ್ಟ ಇಲ್ಲ. ವಾರಕೊಂದು ಸಲವಾದರು ಮನೆಯಲ್ಲಿ ಮಾಡಿಕೊಂಡು ತಿನ್ನುತ್ತಿರುತ್ತೇವೆ. ಶೇಂಗಾ, ಕಾಯಿ, ಹೂರಣದ ಹೋಳಿಗೆ ಎಲ್ಲಾ ತಿಂದಿದ್ದೇನೆ. ಹೋಳಿಗೆ ಮಾಡೋಕು ಬರತ್ತೆ ಅಂತಾರೆ ನಟಿ ಅದಿತಿ.
ನಟ ಚೇತನ್ ಮಾತನಾಡಿ "ಕರ್ನಾಟಕದ ಸ್ಪೆಷಲ್ ಅಂದರೆ ಹೋಳಿಗೆ. ನಾನು ಅಮೆರಿಕಾದಲ್ಲಿ ಇದ್ದರು ನನ್ನ ಹುಟ್ಟಿದ ಹಬ್ಬಕ್ಕೆ ಅಮ್ಮ ಹೋಳಿಗೆ ಮಾಡುತ್ತಿದ್ದರು. ಇಲ್ಲಿಗೆ ಅಜ್ಜಿ ಮಾಡಿಕೊಡುತ್ತಿದ್ದರು. ನಮ್ಮದೇ ಆದ ಶೈಲಿ ಇದು. ಇದನ್ನು ಉಳಿಸಿ ಬೆಳೆಸಬೇಕಿದೆ. ಬಾದಾಮಿ ಹೋಳಿಗೆ ಮೊದಲ ಬಾರಿಗೆ ತಿಂದಿದ್ದು" ಅಂತಾರೆ ನಟ ಚೇತನ್.
ಮುರಳಿ ಅವರು ಮಾತನಾಡಿ, "ಮೊದಲಿನಿಂದಲೂ ನಾನು ಭಾಸ್ಕರ್ಸ್ ಅವರ ಮನೆ ಹೋಳಿಗೆಗೆ ಬೆಂಬಲ ನೀಡುತ್ತಿದ್ದೇನೆ. ಅವರ ಶ್ರಮವನ್ನು ಮೊದಲಿನಿಂದಲೂ ಕಂಡಿದ್ದೇನೆ. 9ನೇ ಶಾಖೆ ಆರಂಭಿಸುವುದರ ಹಿಂದೆ ಅವರ ಪರಿಶ್ರಮ ಕಾಣುತ್ತಿದೆ. ರುಚಿ, ಶುಚಿ ಹೋಳಿಗೆಯನ್ನೂ ಇನ್ನೆಲ್ಲೂ ಹುಡುಕುವುದೇ ಬೇಡ. ಮಹಾರಾಷ್ಟ್ರದಲ್ಲೂ ಕೂಡ ಇವರ ಹೋಳಿಗೆ ಆರಂಭಿಸುವ ಯೋಜನೆ ಇದೆ ಎನ್ನುತ್ತಾರೆ ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ.
ಮನೆ ಹೋಳಿಗೆ ಮಾಲೀಕ ಭಾಸ್ಕರ್ ಮಾತನಾಡಿ, "ಹುಬ್ಬಳ್ಳಿ, ಮಂಗಳೂರಿನಲ್ಲೂ ನಮ್ಮ ಶಾಖೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬೆಂಗಳೂರಿನಲ್ಲಿ ಇದು ಏಳನೇ ಶಾಖೆ. ಎಲ್ಲಿ ನಮ್ಮ ಅಂಗಡಿ ಇದ್ದರೂ ಜನ ಹುಡುಕಿಕೊಂಡು ಬರುತ್ತಾರೆ. ದೇಶದ ಮೂಲೆ ಮೂಲೆಯಲ್ಲಿ ಶಾಖೆಗಳನ್ನು ತೆರೆಯುವ ಕನಸು ಇದೆ' ಎಂದರು.