ಕನ್ನಡ ಚಿತ್ರರಂಗದಲ್ಲಿ ದಿಗ್ಗಜ ನಟರು ಎಂದರೆ ತಕ್ಷಣ ನೆನಪಾಗುವುದು ಡಾ. ರಾಜ್ಕುಮಾರ್, ಡಾ. ಅಂಬರೀಶ್ ಹಾಗು ಡಾ. ವಿಷ್ಣುವರ್ಧನ್. ಆದರೆ ಅಣ್ಣಾವ್ರು ಮತ್ತು ಅಂಬಿಗೆ ಸಿಕ್ಕಿರುವ ಮನ್ನಣೆ ವಿಷ್ಣು ದಾದಾಗೆ ಸಿಗುತ್ತಿಲ್ಲ ಎಂದು ಅವರ ಅಭಿಮಾನಿಗಳು ಆರೋಪಿಸುತ್ತಲೇ ಇರುತ್ತಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಕಟ್ಟಡಕ್ಕೆ ಡಾ. ರಾಜ್ಕುಮಾರ್ ಭವನ ಹಾಗು ಡಾ. ಅಂಬರೀಶ್ ಆಡಿಟೋರಿಯಂ ಎಂಬ ಹೆಸರನ್ನ ಇಡಲಾಗಿದೆ. ಈ ವಿಚಾರವಾಗಿ ಹಲವು ಬಾರಿ ವಿಷ್ಣುವರ್ಧನ್ ಅಭಿಮಾನಿಗಳ ಸಂಘದವರು ಮತ್ತು ಅಭಿಮಾನಿಗಳು, ಯಾಕೆ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಕಟ್ಟಡಕ್ಕೆ ವಿಷ್ಣುವರ್ಧನ್ ಹೆಸರು ಇಟ್ಟಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಇದೀಗ ವಿಷ್ಣುವರ್ಧನ್ ಅಳಿಯ ಅನಿರುದ್ಧ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಕಟ್ಟಡಕ್ಕೆ ದಿಗ್ಗಜ ನಟರಾದ ರಾಜ್ಕುಮಾರ್, ಅಂಬರೀಶ್ ಹೆಸರನ್ನ ಇಟ್ಟಿರೋದು ಸಂತೋಷದ ವಿಚಾರ. ಇದು ಅತ್ಯಂತ ಸೂಕ್ತ. ಆದರೆ ಅಲ್ಲಿ ಸಾಸಹ ಸಿಂಹನ ಹೆಸರಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ನಾನು ಕಲಾವಿದರ ಜತೆಯಲ್ಲಿ ಮಾತನಾಡಲೇ ಎಂದು ಭಾರತಿ ಅಮ್ಮನವರನ್ನು ಕೇಳಿದೆ. ಅವರು ಬೇಡ ಎಂದು ಹೇಳಿದರು. ಅಧಿಕಾರಿಗಳಿಗೆ ಇಂದಲ್ಲ, ನಾಳೆ ಅರ್ಥ ಆಗುತ್ತೆ. ನಾವಾಗೇ ಕೇಳೋದು ಬೇಡ ಎಂದು ಹೇಳಿದರು. ಆದರೆ ಎಷ್ಟು ದಿನ ಕಳೆದರೂ ನಮ್ಮ ಅಧಿಕಾರಿಗಳು, ಕಲಾವಿದರಿಗೆ ಈ ವಿಚಾರ ತಲೆಗೆ ಬಂದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

ನಾವಾಗೇ ಕೇಳೋಕೆ ಮುಜುಗರ ಆಗುತ್ತಿದೆ. ಆದರೆ ಕೇಳಬೇಕಾದ ಪರಿಸ್ಥಿತಿ ಇದೆ. ಅಪ್ಪಾವ್ರಿಗೆ ಸಿಗಬೇಕಾದ ಗೌರವ ಸಿಗಲೇಬೇಕು. ನಾನು ಈ ಹಿಂದೆ ಒಂದು ಜಾಗದಲ್ಲಿ ಅಪ್ಪಾವ್ರ ಪುತ್ಥಳಿ ಇಡಲು ಅಂದಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರನ್ನು ಕೇಳಿಕೊಂಡಾಗ ಹೀಗೆ ನಟರು ಬರುತ್ತಾರೆ, ಹೋಗ್ತಾರೆ. ಅವರೆಲ್ಲರ ಪುತ್ಥಳಿ ಇಡಲು ಇಲ್ಲಿ ಜಾಗವಿಲ್ಲ ಎಂಬ ಮಾತು ಬಂತು ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಚಿತ್ರರಂಗ ಕಲಾವಿದರು ಹಾಗೂ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದವರು ಯಾವ ರೀತಿ ಸ್ಪಂದಿಸುತ್ತಾರೆ ಕಾದು ನೋಡಬೇಕು.