ಬಿಗ್ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿಯಾಗಿದ್ದ ಶಂಕರ್ ಅಶ್ವತ್ಥ್ ಅವರು ಎಲಿಮಿನೇಟ್ ಆದರೂ ನಗುತ್ತಲೇ ಹೊರ ಬಂದವರು. ಅವರು ಹೊರ ಬಂದಮೇಲೆ ಏನ್ ಮಾಡುತ್ತಿರಬಹುದು ಎಂಬ ಕುತೂಹಲವಂತೂ ಎಲ್ಲಾ ಅಭಿಮಾನಿಗಳಲ್ಲೂ ಕಾಡುತ್ತಿತ್ತು. ಆದ್ರೀಗ ಅವರು ತಮ್ಮ ಲಾಕ್ಡೌನ್ ಅವಧಿಯನ್ನು ಸದುಪಯೋಗ ಪಡಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬಿಗ್ಬಾಸ್ ಮನೆಗೆ ಹೋಗುವ ಮುನ್ನ ಅವರು ಕ್ಯಾಬ್ ಡ್ರೆವರ್ ಆಗಿ ಕಾರ್ಯನಿರ್ವಹಿಸಿದ್ದ ಶಂಕರ್ ಅಶ್ವತ್ಥ್ ಸದ್ಯ ಲಾಕ್ಡೌನ್ ಆಗಿರುವುದರಿಂದ ತಮ್ಮ ಮನೆಯವರ ಜೊತೆ ಕೈ ಜೋಡಿಸಿ ಗ್ರಾಹಕರಿಗೆ ಊಟ ತಿಂಡಿ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.
ತಮ್ಮ ಕೆಲಸದ ಬಗ್ಗೆ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, “ಬಡಿದು ತಿನ್ನುವುದಕ್ಕಿಂತ ದುಡಿದು ತಿನ್ನುವುದು ಮೇಲು!! ಬಡಿದು ತಿಂದ ಹಣ ನಮ್ಮ ಸಂತಾನವನ್ನು ಕಾಡುತ್ತೆ, ಅದೇ ದುಡಿದು ತಂದ ಹಣ ನಮ್ಮ ಏಷ್ಟೋ ಪೀಳಿಗೆಗಳನ್ನು ದುಪ್ಪಟ್ಟು ಕಾಪಾಡುತ್ತೆ. ಇದು ನಮ್ಮಪ್ಪ ನನಗೆ ಹೇಳಿಕೊಟ್ಟ ಪಾಠ. ಹೇಗಿದ್ರೂ ಊಬರ್ ಸಂಪಾದನೆನೂ ಇಲ್ಲ, ಈ ಲಾಕ್ಡೌನ್ ಪರಿಸ್ಥಿತಿಯಲ್ಲೂ ಸುಮಾರು ಇಪತ್ತು ಕಿ. ಮೀ ವಾಹನ ಚಾಲನೆ ಮಾಡಿ ದುಡಿಯಲು ಮನೆಯವರಿಗೆ ಕೈ ಜೋಡಿಸುತ್ತಿದ್ದೇನೆ. ಒಂದಂತೂ ಸತ್ಯ, ಸುಮ್ಮನೆ ಮನೆಯಲ್ಲಿ ಕುಳಿತು ಕಾಲ ಕಳೆಯುವುದಕ್ಕಿಂತ ಈ ರೀತಿ ಕ್ಯಾರಿಯರ್ ಕೊಡುತ್ತಾ ಕಾಲ ಕಳೆಯೋದ್ರಿಂದ ಒಂದು ನಾಲ್ಕು ಕಾಸಾದ್ರೂ ಸಂಪಾದನೆ ಮಾಡಿ ನೆಮ್ಮದಿಯಿಂದ ಆ ದಿನ ಮಲಗಬಹುದು. ಏನಂತೀರಾ?” ಎಂದು ಬರೆದುಕೊಂಡಿದ್ದಾರೆ.
ಇದೀಗ ಶಂಕರ್ ಅಶ್ವಥ್ ಅವರ ಕೆಲಸ ನೋಡಿ ಅವರ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. “ನಿಜವಾಗಿ ನೀವು ಮಾದರಿ ಕಲಾವಿದರು. ಕೆಲವು ಕಲಾವಿದರ ಅಡ್ಡದಾರಿಯಲ್ಲಿಯೇ ಹಣ ಮಾಡುವವರ ಮಧ್ಯೆ ಇಂತಹ ಪ್ರಾಮಾಣಿಕ ಬದುಕು ಎಲ್ಲರಿಗೂ ಮಾದರಿ” ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.
ಓದಿ: ಶಾರೂಖ್ ಖಾನ್ ಮುಟ್ಟಿದ್ದಕ್ಕೆ ಒಂದಿಡೀ ದಿನ ಕೈ ತೊಳೆದಿರಲಿಲ್ಲವಂತೆ ಫಾತಿಮಾ ಸನಾ ಶೇಖ್