ಎರಡು ವಾರಗಳ ಹಿಂದೆ ಬಿಡುಗಡೆಯಾದ ಮಂಸೋರೆ ನಿರ್ದೇಶನದ 'ಆಕ್ಟ್ 1978' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆ ಸಿನಿಮಾ ಬಿಡುಗಡೆಯಾಗಿ ಎರಡನೆಯ ವಾರಕ್ಕೇ ಅವರು ಹೊಸ ಚಿತ್ರವೊಂದನ್ನು ಘೋಷಿಸಿದ್ದಾರೆ. ಈ ಬಾರಿ ಮಂಸೋರೆ ಐತಿಹಾಸಿಕ ಚಿತ್ರವೊಂದನ್ನು ಮಾಡಲು ಹೊರಟಿದ್ದಾರೆ. ರಾಣಿ ಅಬ್ಬಕ್ಕನ ಕುರಿತು ಸಿನಿಮಾ ಮಾಡಲು ಮಂಸೋರೆ ತಯಾರಿ ನಡೆಸಿದ್ದು ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಬರೆದುಕೊಂಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ಮಂಸೋರೆ ಈ ಕುರಿತು ಸಂಶೋಧನೆ ನಡೆಸುತ್ತಿದ್ದರಂತೆ. ಇದೀಗ ಚಿತ್ರಕಥೆ ಒಂದು ಹಂತಕ್ಕೆ ಬಂದಿದ್ದು, ಮುಂದಿನ ವರ್ಷ ಈ ಚಿತ್ರವನ್ನು ಪ್ರಾರಂಭಿಸಲು ಅವರು ಯೋಚಿಸಿದ್ದಾರೆ. ಈ ಸಿನಿಮಾ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ತುಳು ಭಾಷೆಗಳಲ್ಲಿ ಕೂಡಾ ಬಿಡುಗಡೆ ಮಾಡಲು ಮಂಸೋರೆ ನಿರ್ಧರಿಸುತ್ತಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಲಿದೆ. ಚಿತ್ರವನ್ನು ಸತ್ಯ ಹೆಗಡೆ ಛಾಯಾಗ್ರಹಣ ಮಾಡಿದರೆ, ಅಜನೀಶ್ ಲೋಕನಾಥ್ ಚಿತ್ರದ ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ.
''ಜಲಮಾರ್ಗದ ಯುದ್ಧನೀತಿಯಲ್ಲಿ ನೈಪುಣ್ಯತೆ ಹೊಂದಿದ್ದ ಏಕೈಕ ರಾಣಿ ಅಬ್ಬಕ್ಕ, ಮೊಗವೀರರು ಮತ್ತು ಮಬ್ಯಾರಿಗಳ ಜೊತೆಗೆ ಸೇರಿಕೊಂಡು ಬಲಿಷ್ಠವಾದ ಸೇನೆಯನ್ನು ಕಟ್ಟಿ, ಪೋರ್ಚುಗೀಸರ ವಿರುದ್ಧ ಅಬ್ಬಕ್ಕೆ ಯುದ್ಧ ಮಾಡಿದ್ದರು. ಭಾರತದ ಮೇಲೆ ದಾಳಿ ಮಾಡುತ್ತಿದ್ದ ಪೋರ್ಚುಗೀಸರನ್ನು ಇಲ್ಲಿ ಕಾಲಿಡದಂತೆ ಮಾಡಿದ್ದರು. ಆಕೆಯ ಸಾಹಸಗಳನ್ನು ನೋಡಿ ಹೆದರಿದ್ದ ಪೋರ್ಚುಗೀಸರು ಕುತಂತ್ರದ ಮೂಲಕ ಆಕೆಯನ್ನು ಸೋಲಿಸುತ್ತಾರೆ. ಈ ಅಂಶಗಳನ್ನು ಇಟ್ಟುಕೊಂಡು ಚಿತ್ರ ಮಾಡುತ್ತಿದ್ದೇನೆ. ರಾಣಿ ಅಬ್ಬಕ್ಕ ಎಲ್ಲರಿಗೂ ಮಾದರಿಯಾಗಬೇಕು. ಆಕೆಯ ಸಾಧನೆ ಇತರರಿಗೂ ತಿಳಿಯಬೇಕು ಎಂಬ ಉದ್ದೇಶದಿಂದ ಈ ಸಿನಿಮಾವನ್ನು ಮಾಡುವ ನಿರ್ಧಾರಕ್ಕೆ ಬಂದಿದ್ದೇನೆ'' ಎನ್ನುತ್ತಾರೆ ಮಂಸೋರೆ. ರಾಣಿ ಅಬ್ಬಕ್ಕನ ಪಾತ್ರವನ್ನು ಯಾರು ಮಾಡುತ್ತಾರೆ ಎಂಬ ವಿಚಾರ ಮಾತ್ರ ಸದ್ಯಕ್ಕೆ ತಿಳಿದುಬಂದಿಲ್ಲ. ಸಂಕ್ರಾಂತಿಯಿಂದ ಸಿನಿಮಾ ಕೆಲಸಗಳು ಆರಂಭವಾಗಲಿದ್ದು 2023 ರಲ್ಲಿ ಬಿಡುಗಡೆಯಾಗಲಿದೆಯಂತೆ.