ಫೆಬ್ರವರಿ ತಿಂಗಳು ಕನ್ನಡ ಸಿನಿಮಾಗಳ ಉತ್ಸವದ ತಿಂಗಳು ಎಂದೇ ಹೇಳಬಹುದು. ಮೊದಲ ವಾರ 9, ಎರಡನೇ ವಾರ 12, ಮೂರನೇ ವಾರ 7 ಹಾಗೂ ಫೆಬ್ರವರಿ 28, ಕಡೆಯ ವಾರ 7 ಕನ್ನಡ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇಡೀ ಕನ್ನಡ ಚಿತ್ರರಂಗ ದಂಗಾಗುವ ಹಾಗೇ ಸಿನಿಮಾಗಳು ಬಿಡುಗಡೆ ಆಗಿವೆ. ಚಲನಚಿತ್ರ ವಾಣಿಜ್ಯ ಮಂಡಳಿ ಕೂಡಾ ಯಾವುದೇ ಕಟ್ಟು ಪಾಡು ವಿಧಿಸಲು ಸಾಧ್ಯವಾಗಿಲ್ಲ. ಕಳೆದ ವಾರ ಬಿಡುಗಡೆ ಆದ ಸಿನಿಮಾಗಳಲ್ಲಿ 'ಶಿವಾಜಿ ಸುರತ್ಕಲ್' ಗಳಿಕೆ ಮಾತ್ರ ಉತ್ತಮವಾಗಿದ್ದು ಉಳಿದ ಸಿನಿಮಾಗಳು ಕೇವಲ ಒಂದೇ ದಿನಕ್ಕೆ ಥಿಯೇಟರ್ನಿಂದ ಎತ್ತಂಗಡಿಯಾಗಿದೆ ಎನ್ನಲಾಗುತ್ತಿದೆ.
ಫೆಬ್ರವರಿ ತಿಂಗಳಲ್ಲಿ 29 ದಿನಗಳಿದ್ದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇದು ದಾಖಲೆ ಎಂದೇ ಹೇಳಬಹುದು. ಕಳೆದ ವರ್ಷ ಫೆಬ್ರವರಿಯಲ್ಲಿ 14 ಸಿನಿಮಾಗಳು ಬಿಡುಗಡೆ ಆಗಿದ್ದವು. ಈ ಬಾರಿ ಕಳೆದ ಬಾರಿಗಿಂತ ದುಪ್ಪಟ್ಟು ಸಿನಿಮಾಗಳು ಬಿಡುಗಡೆ ಆಗಿವೆ. ಇನ್ನು ಫೆಬ್ರವರಿ ಕಡೆಯ ವಾರ 12 ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮಾ ಉತ್ಸವ ಜರುಗುತ್ತಿದೆ. ಫೆಬ್ರವರಿ 27 ರಿಂದ ಮಾರ್ಚ್ 4 ವರೆಗೆ 225 ಸಿನಿಮಾಗಳು ಪ್ರದರ್ಶನ ಕೂಡಾ ಆಗುತ್ತಿದೆ. ಅಂದ ಹಾಗೆ ಈ ವಾರ ಮಾಯಾ ಬಜಾರ್, ಬಿಚ್ಚುಗತ್ತಿ, ಆನೆಬಲ, ಅಸುರ ಸಂಹಾರ, ಜಗ್ಗಿ ಜಗನ್ನಾಥ್, ಓ ಪುಷ್ಪ ಐ ಹೇಟ್ ಟಿಯರ್ಸ್ ಹಾಗು ಶಿವ ಸಿನಿಮಾಗಳು ಬಿಡುಗಡೆಯಾಗುತ್ತಿವೆ.
ಫೆಬ್ರವರಿ 7 ರಂದು ಜಂಟಲ್ ಮ್ಯಾನ್, ಮಾಲ್ಗುಡಿ ಡೇಸ್, ದಿಯಾ, ಓಜಸ್, ಮತ್ತೆ ಉದ್ಭವ, ಬಿಲ್ಗೇಟ್ಸ್, ಜಿಲ್ಕ, 3rd ಕ್ಲಾಸ್, ಡೆಡ್ಲಿ ಆಫರ್ ಸಿನಿಮಾಗಳು ಬಿಡುಗಡೆಯಾಗಿದ್ದವು. ಫೆಬ್ರವರಿ 14 ರಂದು ಸಾಗುತ ದೂರ ದೂರ, ಡೆಮೋ ಪೀಸ್, ನವರತ್ನ, ಬೆಂಕಿಯಲ್ಲಿ ಅರಳಿದ ಹೂವು, ಗಿಫ್ಟ್ ಬಾಕ್ಸ್, ಗಡ್ಡಪ್ಪ ಸರ್ಕಲ್, ಸಾವು, ಲೈಟ್ ಆಗಿ ಲವ್ ಆಗಿದೆ, ತುಂಡ್ ಹೈಕ್ಲ ಸಾವಾಸ, ಪ್ರೇಮಾಸುರ, ಪ್ರೀತಿಯೆಂದರೇನು ಬಿಡುಗಡೆ ಆಗಿದ್ದರೆ ಕಳೆದ ವಾರ ಅಂದರೆ ಫೆಬ್ರವರಿ 21 ರಂದು ಪಾಪ್ ಕಾರ್ನ್ ಮಂಕಿ ಟೈಗರ್, ಆದ್ಯಾ, ಶಿವಾಜಿ ಸುರತ್ಕಲ್, ಮೌನಮ್, ಜ್ಞಾನ ಗಂಗೆ, ಓಂ ಶಾಂತಿ ಓಂ ಸಿನಿಮಾಗಳು ತೆರೆ ಕಂಡಿದ್ದವು. ಇಷ್ಟು ಸಿನಿಮಾಗಳು ತಾ ಮುಂದು ನಾ ಮುಂದು ಎಂದು ಬಿಡುಗಡೆಯಾಗಿದ್ದು ನೋಡಿದರೆ ರಾಜ್ಯ ಸರ್ಕಾರ ನೀಡುವ 10 ಲಕ್ಷ ರೂಪಾಯಿ ಸಬ್ಸಿಡಿ ಮೇಲೆ ಕಣ್ಣು ಇದೆ ಎಂಬ ಮಾತು ಕೇಳಿಬರುತ್ತಿದೆ.