ಬಾಲಿವುಡ್ನ ಅತ್ಯಂತ ಬ್ಯುಸಿ ನಟರಲ್ಲಿ ಸಲ್ಮಾನ್ ಖಾನ್ ಕೂಡ ಒಬ್ಬರು. ಕಳೆದ ತಿಂಗಳಷ್ಟೇ ಅವರ 'ರಾಧೇ' ಚಿತ್ರ ಬಿಡುಗಡೆಯಾಗಿದೆ. ಜತೆಗೆ ಅಂತಿಮ್, ಟೈಗರ್ 3, ಕಿಕ್ 2 ಮತ್ತು ಭಾಯ್ಜಾನ್ ಎಂಬ ನಾಲ್ಕು ಚಿತ್ರಗಳಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದು, ಅಂತಿಮ್ ಮತ್ತು ಟೈಗರ್ 3 ಚಿತ್ರಗಳ ಚಿತ್ರೀಕರಣ ಈಗಾಗಲೇ ಶುರುವಾಗಿದೆ. ಇದೆಲ್ಲದರ ಜತೆಗೆ ಸಲ್ಮಾನ್ ಖಾನ್ ಇನ್ನೂ ಎರಡು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದು, ಸದ್ಯದಲ್ಲೇ ಈ ಎರಡೂ ಚಿತ್ರಗಳ ಕುರಿತಾದ ಪ್ರಕಟಣೆ ಹೊರ ಬೀಳಲಿದೆ ಎನ್ನುವ ಮಾಹಿತಿ ಸಿಕ್ಕಿದೆ.
ಹೌದು, ಸಲ್ಮಾನ್ ಎರಡು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಎರಡೂ ಚಿತ್ರಗಳು ರಿಮೇಕ್ಗಳು ಎನ್ನುವುದು ವಿಶೇಷ. ಈ ಪೈಕಿ, ವಿಜಯ್ ಅಭಿನಯದ ತಮಿಳು ಚಿತ್ರ ಮಾಸ್ಟರ್ ಒಂದಾದರೆ, ರವಿತೇಜ ಅಭಿನಯದ ತೆಲುಗು ಚಿತ್ರ ಕಿಲಾಡಿ ಎರಡನೆಯದು. ಮಾಸ್ಟರ್ ಚಿತ್ರವು ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿದ್ದು, ಸಲ್ಮಾನ್ ಆಗಲೇ ಚಿತ್ರ ಮಾಡುವ ಪ್ಲಾನ್ ಹಾಕಿಕೊಂಡಿದ್ದರಂತೆ. ಇನ್ನು, ರವಿತೇಜ ಅಭಿನಯದ ಕಿಲಾಡಿ ಚಿತ್ರವನ್ನೂ ಸಲ್ಮಾನ್ ನೋಡಿದ್ದು, ಬಹಳ ಖುಷಿಯಾಗಿದ್ದಾರಂತೆ. ಈ ಎರಡೂ ಚಿತ್ರಗಳನ್ನು ಹಿಂದಿಗೆ ರಿಮೇಕ್ ಮಾಡುವುದು ಅವರ ಯೋಚನೆ.
ಈ ಪೈಕಿ, ಮಾಸ್ಟರ್ ಚಿತ್ರವು ಮೊದಲು ಶುರುವಾಗುವ ಸಾಧ್ಯತೆ ಇದೆ. ಅದಕ್ಕೆ ಮೊದಲು, ವಿಜಯ್ ಸೇತುಪತಿ ಪಾತ್ರಕ್ಕೆ ಸೂಕ್ತ ನಟನ ಹುಡುಕಾಟ ನಡೆದಿದ್ದು, ಬದಲಿ ನಟ ಸಿಕ್ಕ ತಕ್ಷಣವೇ ಮಾಸ್ಟರ್ ಚಿತ್ರವು ಶುರುವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಿಲಾಡಿ ಚಿತ್ರ ಬಿಡುಗಡೆಯಾಗಬೇಕಿದ್ದು, ಆ ಚಿತ್ರ ಬಿಡುಗಡೆಯಾದ ನಂತರ, ಹಿಂದಿಯಲ್ಲಿ ಪ್ರಾರಂಭವಾಗಲಿದೆಯಂತೆ. ಈ ಚಿತ್ರ ಬಿಡುಗಡೆಯಾಗುವುದಕ್ಕೆ ಇನ್ನೆರೆಡು ವರ್ಷಗಳಾದರೂ ಬೇಕು. ಆದರೆ, ಚಿತ್ರ ಚೆನ್ನಾಗಿರುವುದರಿಂದ, ರಿಮೇಕ್ ಹಕ್ಕುಗಳನ್ನು ಸಲ್ಮಾನ್ ಖರೀದಿಸಿಟ್ಟುಕೊಂಡಿದ್ದಾರೆ ಎನ್ನುವ ಸುದ್ದಿ ತಿಳಿದು ಬಂದಿದೆ..
ಇದನ್ನೂ ಓದಿ: ತಾಪ್ಸಿ ಪನ್ನು ಹಸೀನ್ ದಿಲ್ರುಬಾ ಸಿನಿಮಾ ಟ್ರೈಲರ್ ರಿಲೀಸ್