ನವದೆಹಲಿ: ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪುತ್ರಿ ವಮಿಕಾ ಜನಿಸಿ ಬರೋಬ್ಬರಿ ಒಂದು ವರ್ಷವಾಗಿದೆ. ಅಂದಿನಿಂದ ಇಂದಿನವರೆಗೂ ಕೊಹ್ಲಿ ಹಾಗೂ ಅನುಷ್ಕಾ ಅಭಿಮಾನಿಗಳು ವಮಿಕಾ ಚಿತ್ರವನ್ನು ರಿವಿಲ್ ಮಾಡುವಂತೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರು. ಆದರೆ, ಮಗಳ ಖಾಸಗಿತನಕ್ಕೆ ಧಕ್ಕೆ ಬರಬಾರದು ಎಂಬ ಕಾರಣಕ್ಕೆ ಈ ದಂಪತಿ ಮಗಳ ಮುಖವನ್ನು ಇಷ್ಟು ದಿನ ಎಲ್ಲಿಯೂ ರಿವೀಲ್ ಮಾಡಿರಲಿಲ್ಲ.
ಹೊರಗೆ ಮಗಳ ಜೊತೆ ಕಾಣಿಸಿ ಕೊಂಡಾಗ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮಗಳ ಮುಖವನ್ನು ಮುಚ್ಚಿಕೊಂಡು ಓಡಾಡುತ್ತಿದ್ದರು. ಅದೆಷ್ಟೋ ಬಾರಿ ಕ್ಯಾಮರಾಗಳು ಅನುಷ್ಕಾ ಹಾಗೂ ಕೊಹ್ಲಿ ಹಿಂದೆ ಬಿದ್ದು ವಮಿಕಾ ಫೋಟೋ ತೆಗೆಯಲು ಪ್ರಯತ್ನಿಸಿದ ವೇಳೆ ಫೋಟೋ ತೆಗೆಯಬೇಡಿ ಎಂದು ಈ ದಂಪತಿ ಖುದ್ದಾಗಿ ಮನವಿ ಮಾಡಿದ್ದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಹೀಗಾಗಿ ಇದುವರೆಗೂ ವಿರಾಟ್ ಹಾಗೂ ಅನುಷ್ಕಾ ಮಗಳು ಹೇಗೆ ಕಾಣುತ್ತಾರೆ ಎಂಬ ಸಣ್ಣ ಸುಳಿವು ಕೂಡಾ ಅಭಿಮಾನಿಗಳಿಗೆ ಇರಲಿಲ್ಲ. ಆದರೆ ದಕ್ಷಿಣ ಆಫ್ರಿಕಾ ಹಾಗೂ ಭಾರತದ ನಡುವೆ ನಡೆದ ಮೂರನೇ ಏಕದಿನ ಪಂದ್ಯದ ವೇಳೆ ವಮಿಕಾ ಕೊಯ್ಲಿ ಫೋಟೋಗಳು ವೈರಲ್ ಆಗಿವೆ.
ಮಾಧ್ಯಮಗಳ ಕಣ್ಣಿಗೆ ಬಿದ್ದ ಕೊಹ್ಲಿ ಪುತ್ರಿ: ನಿನ್ನೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಮೂರನೇ ಪಂದ್ಯಕ್ಕೆ ಅನುಷ್ಕಾ ಶರ್ಮಾ ಅವರು ಮಗಳು ವಮಿಕಾ ಜತೆ ಬಂದಿದ್ದರು. ಪೆವಿಲಿಯನ್ನಲ್ಲಿ ಮಗಳ ಜತೆ ಕುಳಿತು ಪಂದ್ಯ ವೀಕ್ಷಣೆ ಮಾಡುತ್ತಿದ್ದರು. ಈ ವೇಳೆ, ಕ್ಯಾಮೆರಾಮೆನ್ ವಮಿಕಾಳನ್ನು ಸೆರೆ ಹಿಡಿದಿದ್ದಾನೆ. ಕಪ್ಪು ಬಣ್ಣದ ಬಟ್ಟೆ ಧರಿಸಿ ನಿಂತಿದ್ದ ಅನುಷ್ಕಾ ಶರ್ಮಾ ಜೊತೆ ಪಿಂಕ್ ಕಲರ್ ಡ್ರೆಸ್ ನಲ್ಲಿ ವಮಿಕಾ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದ್ದಾಳೆ.
ಅಪ್ಪನ ಜೆರಾಕ್ಸ್ ಪ್ರತಿ ಎಂದು ಅಭಿಮಾನಿಗಳು: ವಮಿಕಾ ನೋಡಲು ವಿರಾಟ್ ಕೊಹ್ಲಿ ಅಂತೆ ವಮಿಕಾ ಕಾಣಿಸುತ್ತಿದ್ದು, ವಿರಾಟ ಹಾಗೂ ಅನುಷ್ಕಾ ಅಭಿಮಾನಿಗಳು ಅಪ್ಪನ ಜೆರಾಕ್ಸ್ ಕಾಪಿ ಎಂದು ಸಂತಸ ವ್ಯಕ್ತ ಪಡಿಸುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ ಕೊಹ್ಲಿ 63 ಬಾಲ್ ನಲ್ಲಿ 50 ರನ್ ಗಳಿಸಿದರು. ಈ ವೇಳೆ ಅನುಷ್ಕಾ ಶರ್ಮಾ ತನ್ನ ಮಗಳ ಜೊತೆ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದರು. ಕೊಹ್ಲಿ ಅರ್ಧಶತಕ ಬಾರಿಸುತ್ತಿದ್ದಂತೆ ಚಪ್ಪಾಳೆ ತಟ್ಟಿ ಅನುಷ್ಕಾ ಸಂತಸ ವ್ಯಕ್ತಪಡಿಸಿದರು.
ವಮಿಕಾ ಫೋಟೋ ತೋರಿಸಿದ್ದಕ್ಕೆ ಆಕ್ರೋಶ: ಒಂದು ಕಡೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಪುತ್ರಿ ವಮಿಕಾ ಫೋಟೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ, ಕೆಲವೊಂದಷ್ಟು ಜನರು ವಮಿಕಾ ಫೋಟೋ ತೋರಿಸಿದ ವಾಹಿನಿ ವಿರುದ್ಧ ಮುಗಿಬಿದ್ದಿದ್ದಾರೆ.
ಇಷ್ಟು ದಿನ ಮಗಳ ಖಾಸಗಿ ಜೀವನಕ್ಕೆ ಧಕ್ಕೆ ಬರಬಾರದು ಎಂದು ಕೊಹ್ಲಿ ದಂಪತಿ ಮಗಳ ಫೋಟೋವನ್ನ ಎಲ್ಲಿಯೂ ರಿವಿಲ್ ಮಾಡಿರಲಿಲ್ಲ. ಆದರೆ, ಅವರ ಅನುಮತಿ ಇಲ್ಲದೇ ವಿಡಿಯೋ ಪ್ರಸಾರ ಮಾಡಿರುವುದಕ್ಕೆ ಅನುಷ್ಕಾ ಹಾಗೂ ವಿರಾಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ನಮ್ಮ ಮಗುವಿಗೆ ಖಾಸಗಿತನ ನೀಡಿ. ಸೋಷಿಯಲ್ ಮೀಡಿಯಾದಿಂದ ಮುಕ್ತವಾಗಿ ಜೀವನವನ್ನು ನಡೆಸಲು ಅವಳಿಗೆ ಅವಕಾಶವನ್ನು ಕೊಡಿ. ಅವಳು ಬೆಳೆದಂತೆ ನಾವು ಅವಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮ ಬೆಂಬಲದ ಅಗತ್ಯವಿದೆ. ಅವಳ ಚಿತ್ರಗಳನ್ನು ಪೋಸ್ಟ್ ಮಾಡದಿರಲು ಕೋರುತ್ತೇವೆ. ನಮ್ಮ ಫ್ಯಾನ್ ಕ್ಲಬ್‌ಗಳು ಮತ್ತು ಸೋಷಿಯಲ್ ಮೀಡಿಯಾ ಬಳಕೆದಾರರಿಗೆ ವಿಶೇಷ ಧನ್ಯವಾದಗಳು ಎಂದು ಅನುಷ್ಕಾ ಈ ಹಿಂದೆ ಬರೆದುಕೊಂಡಿದ್ದರು.
ಇದನ್ನೂ ಓದಿ: ನಿಮ್ಮ ಸಾಧನೆಗೆ ನಾನು, ನಿಮ್ಮ ಮಗಳು ಹೆಮ್ಮೆ ಪಡುತ್ತೇವೆ.. ಕೊಹ್ಲಿ ನಾಯಕತ್ವ ತ್ಯಜಿಸಿದ ನಂತರ ಅನುಷ್ಕಾ ಭಾವುಕ ಬರಹ..