ಮುಂಬೈ: ಡ್ರಗ್ಸ್ ಸೇವನೆ ಹಾಗೂ ಕ್ರೂಸ್ ಹಡಗಿನಲ್ಲಿ ನಡೆದಿದೆ ಎನ್ನಲಾದ ಡ್ರಗ್ಸ್ ಪಾರ್ಟಿಗೆ ಸಂಬಂಧಿಸಿದ ಆರೋಪದಡಿ ಬಂಧಿನದಲ್ಲಿರುವ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಗ್ಗೆ ನಟ ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಹಾಗೂ ಫ್ಯಾಷನ್ ಡಿಸೈನರ್ ಸುಸೇನ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಅವರು, ಆರ್ಯನ್ ಖಾನ್ ಒಳ್ಳೆಯ ಹುಡುಗ. ಇಂತಹ ಸಂಕಷ್ಟದ ಸಮಯದಲ್ಲಿ ನಟ ಶಾರುಖ್ ಖಾನ್ ಹಾಗೂ ಗೌರಿ ಖಾನ್ ಅವರೊಂದಿಗೆ ನಿಲ್ಲುವುದಾಗಿ ಹೇಳಿದ್ದಾರೆ.
ದುರಾದೃಷ್ಟವಶಾತ್ ಆತ ತಪ್ಪಾದ ಸಮಯದಲ್ಲಿ, ತಪ್ಪಾದ ಸ್ಥಳದಲ್ಲಿ ಇದ್ದನು. ಕಾಗೆ ಕೂರುವುದಕ್ಕೂ ಕೊಂಬೆ ಮುರಿಯುವುದಕ್ಕೂ ಸರಿಯಾದಂತಿದೆ. ಡ್ರಗ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ-ನಟಿಯರನ್ನು ವಿನಾಕಾರಣ ಬಲಿಪಶುಗಳನ್ನಾಗಿ ಮಾಡಲಾಗುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ ಎಂದಿದ್ದಾರೆ.
ಕಾರ್ಡೆಲಿಯಾ ಕ್ರೂಸ್ ಎಂಬ ಹಡಗಿನಲ್ಲಿ ನಿಷೇಧಿತ ಮಾದಕ ದ್ರವ್ಯ ಸೇವನೆ ಹಾಗೂ ಪಾರ್ಟಿ ನಡೆಸಲಾಗುತ್ತದೆ ಎಂಬ ಆಧಾರದ ಮೇಲೆ ದಾಳಿ ಮಾಡಿದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಅಧಿಕಾರಿಗಳು ಅಕ್ಟೋಬರ್ 2 ರಂದು ಆರ್ಯನ್ ಖಾನ್ ಸೇರಿದಂತೆ ಒಟ್ಟು ಎಂಟು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಮರುದಿನ ಬಂಧನಕ್ಕೊಳಪಡಿಸಿದ್ದರು.
ನಿನ್ನೆ (ಸೋಮವಾರ) ಈ ಬಗ್ಗೆ ವಾದ ಮತ್ತು ಪ್ರತಿ ವಾದ ಆಲಿಸಿದ ಮುಂಬೈ ನ್ಯಾಯಾಲಯವು ಆರ್ಯನ್ ಖಾನ್ ಮತ್ತು ಇತರರನ್ನು ಅ. 7 ರವರೆಗೆ ಎನ್‌ಸಿಬಿಯ ವಶಕ್ಕೆ ನೀಡುವಂತೆ ಆದೇಶಿಸಿದೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿವೆ.