ಹೈದರಾಬಾದ್: 80-90 ರ ದಶಕದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದ ನಟ-ನಟಿಯರ ಮಕ್ಕಳು ಕೂಡಾ ಈಗ ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಇದೀಗ ಸುನಿಲ್ ಶೆಟ್ಟಿ ಪುತ್ರ ಅಹಾನ್ ಶೆಟ್ಟಿ ಕೂಡಾ ಬಾಲಿವುಡ್ಗೆ ಎಂಟ್ರಿ ನೀಡಿದ್ದು 'ತಡಪ್' ಚಿತ್ರದ ಮೂಲಕ ಸಿನಿಕರಿಯರ್ ಆರಂಭಿಸುತ್ತಿದ್ದಾರೆ.
'ತಡಪ್' ಚಿತ್ರದ ಪೋಸ್ಟರ್ ಕೂಡಾ ಬಿಡುಗಡೆಯಾಗಿದ್ದು ಸೆಪ್ಟೆಂಬರ್ 24 ರಂದು ಸಿನಿಮಾ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ. 'ತಡಪ್' , 2018 ರಲ್ಲಿ ತೆಲುಗು ಚಿತ್ರರಂಗದಲ್ಲಿ ದೊಡ್ಡ ಹಿಟ್ ಎನಿಸಿಕೊಂಡ 'ಆರ್ಎಕ್ಸ್100' ಚಿತ್ರದ ರೀಮೇಕ್ ಆಗಿದೆ. ಈ ಚಿತ್ರದಲ್ಲಿ ಕಾರ್ತಿಕೇಯ ಹಾಗೂ ಪಾಯಲ್ ರಜಪೂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಇದೀಗ 'ತಡಪ್' ಚಿತ್ರದಲ್ಲಿ ಅಹಾನ್ ಶೆಟ್ಟಿ ಹಾಗೂ ತಾರಾ ಸುತಾರಿಯಾ ಪ್ರಮುಖ ಪಾತ್ರಧಾರಿಗಳಾಗಿ ಅಭಿನಯಿಸುತ್ತಿದ್ದಾರೆ. ಸಿಖಂದರ್ ಖೇರ್, ಶರತ್ ಸಕ್ಸೇನಾ, ಸುನಿಲ್ ಶೆಟ್ಟಿ ಹಾಗೂ ಇನ್ನಿತರರು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾದ ಬಾಲಿವುಡ್ ತಾರೆಯರು
ಫಾಕ್ಸ್ ಸ್ಟಾರ್ ಸ್ಟುಡಿಯೋಸ್, ನಾದಿಯಾವಾಲಾ ಗ್ರ್ಯಾಂಡ್ಸನ್ ಎಂಟರ್ಟೈನ್ಮೆಂಟ್ ಬ್ಯಾನರ್ನಲ್ಲಿ ಮಿಲನ್ ಲುತ್ರಿಯಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಪ್ರೀತಮ್ ಸಂಗೀತ ನೀಡುತ್ತಿದ್ದಾರೆ. ಹರ್ಷವರ್ಧನ್ ಹಾಗೂ ರಾಮೇಶ್ವರ್ ಹಿನ್ನೆಲೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಅಹಾನ್ ಶೆಟ್ಟಿಯನ್ನು ಸಿನಿಪ್ರಿಯರು ಹೇಗೆ ಸ್ವೀಕರಿಸಲಿದ್ದಾರೆ ಕಾದು ನೋಡಬೇಕು.