ಬಾಹುಬಲಿ ಖ್ಯಾತಿಯ ಡಾರ್ಲಿಂಗ್ ಪ್ರಭಾಸ್ ಅವರ 20ನೇ ಸಿನಿಮಾದ ಫಸ್ಟ್ ಲುಕ್ ಅನ್ನು ಚಿತ್ರತಂಡವು ಕೆಲ ತಿಂಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಬಿಡುಗಡೆ ಮಾಡಿರುವ ವಿಚಾರ ಗೊತ್ತಿದೆ. ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ 'ರಾಧೆ ಶ್ಯಾಮ್' ಸಿನಿಮಾದ ಆಕರ್ಷಕ ಪೋಸ್ಟರ್ಗೆ ಅಭಿಮಾನಿಗಳು ಸಹ ಫಿದಾ ಆಗಿದ್ದಾರೆ. ಈಗ ಪ್ರಭಾಸ್ ಲುಕ್ಕೇ ಚಿತ್ರಕ್ಕೆ ಅತಿದೊಡ್ಡ ಬಲವಾಗಿದೆ ಅಂತಿದೆ ಚಿತ್ರ ತಂಡ.
ಸಾಹೋ ಬಳಿಕ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಹಾಗೂ ಅವರ 20ನೇ ಸಿನಿಮಾ ಇದಾಗಿದ್ದು, ಚಿತ್ರಕ್ಕೆ ತಾತ್ಕಾಲಿಕವಾಗಿ 'ಪ್ರಭಾಸ್ 20' ಎಂದು ಹೆಸರಿಡಲಾಗಿತ್ತು. ಆದರೆ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಟೈಟಲ್ ಫಿಕ್ಸ್ ಮಾಡಿದಂತಾಗಿದೆ.

ಕೊರೊನಾ ಎಫೆಕ್ಟ್ನಿಂದ ರಾಧೆ ಶ್ಯಾಮ್ ಚಿತ್ರದ ಶೂಟಿಂಗ್ ನಿಲ್ಲಿಸಲಾಗಿದ್ದು, ಈ ವಾರದಿಂದ ಚಿತ್ರೀಕರಣ ಮತ್ತೆ ಪ್ರಾರಂಭವಾಗುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಟ್ವಿಟ್ಟರ್ನಲ್ಲಿ ನಿರ್ದೇಶಕ ರಾಧಾಕೃಷ್ಣ ಕೆಲವೊಂದು ಪ್ರಶ್ನೆ ಕೇಳಿದ್ದು, ಅದಕ್ಕೆ ಅವರು ಉತ್ತರಿಸಿದ್ದಾರೆ.
ಪ್ರಭಾಸ್ ಜೊತೆ ಸಿನಿಮಾ ಮಾಡುವುದು ನನ್ನ ಕನಸು. ಆತನೊಂದಿಗೆ ಕೆಲಸ ಮಾಡುವುದು ಸಂತಸ ನೀಡುತ್ತೆ. ಚಿತ್ರದಲ್ಲಿ ಪ್ರಭಾಸ್ ಕಾಣಿಸುವ ವಿಧಾನವೇ ಸಿನಿಮಾಕ್ಕೆ ಪ್ರಮುಖ ಬಲವಾಗಿದೆ. ಮುಂದಿನ ವರ್ಷ ಅಭಿಮಾನಿಗಳ ಮುಂದೆ ನಿಮ್ಮ ‘ರಾಧೆ ಶ್ಯಾಮ್’ ಬರುತ್ತಾರೆ. ಕಥನಾಯಕಿಯಾಗಿ ನಮ್ಮ ಮೊದಲ ಆಯ್ಕೆ ಪೂಜಾ ಹೆಗ್ಡೆ. ಸರಿಯಾದ ಸಮಯಕ್ಕೆ, ಅಭಿಮಾನಿಗಳು ಆಶ್ಚರ್ಯಚಕಿತರಾಗುವಂತೆ ಚಿತ್ರವನ್ನು ಬಿಡುಗಡೆ ಮಾಡುತ್ತೇವೆ’ ಎಂದು ನಿರ್ದೇಶಕ ರಾಧಾಕೃಷ್ಣ ಹೇಳಿದ್ದಾರೆ.
1920 ರ ಕಥೆಯೊಂದಿಗೆ ಈ ಚಿತ್ರ ಮೂಡಿಬರಲಿದ್ದು, ನಿರ್ದೇಶಕ ರಾಧಾಕೃಷ್ಣ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಯುವಿ ಕ್ರಿಯೇಷನ್ಸ್ ಮತ್ತು ಗೋಪಿಕೃಷ್ಣ ಫಿಲ್ಮ್ಸ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗುತ್ತಿದೆ.