ಹೈದರಾಬಾದ್: ಎಲ್ಲರಿಗೂ ಕುಟುಂಬ ಇರುತ್ತೆ. ಹಾಗೆಯೇ ಅವರದ್ದೇ ಆದ ಕೆಲಸ. ಎರಡನ್ನೂ ಬ್ಯಾಲೆನ್ಸ್ ಮಾಡುವುದು ಜಾಣತನ, ಕಲೆಯೂ ಹೌದು. ಒಬ್ಬ ಅಂತಾರಾಷ್ಟ್ರೀಯ ತನಿಖಾಧಿಕಾರಿಗೆ ತನ್ನ ಕುಟುಂಬಕ್ಕೆ ಕೊಡುವಷ್ಟು ಸಮಯ ಇರುತ್ತಾ? ಅವನ ಜೀವನ ಎಷ್ಟು ಕಷ್ಟ. ಕೆಲಸ ಹಾಗೂ ಕುಟುಂಬದ ಒತ್ತಡವನ್ನು ಹೇಗೆಲ್ಲಾ ನಿಭಾಯಿಸಬಲ್ಲ. ಕೊನೆಗೆ ಕುಟುಂಬ ಹಾಗೂ ದೇಶ ರಕ್ಷಣೆ ಎರಡೂ ತನ್ನೆದುರು ಬಂದಾಗ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ..?
ಅಮೇಜಾನ್ ಪ್ರೈಮ್ನಲ್ಲಿ ಬಿಡುಗಡೆಯಾದ 'ಫ್ಯಾಮಿಲಿ ಮ್ಯಾನ್', RAW ಇಲಾಖೆಯ ತನಿಖಾಧಿಕಾರಿಯೊಬ್ಬನ ಬದುಕಿನ ಕಥೆಯನ್ನು ಕಟ್ಟಿಕೊಡುತ್ತದೆ. ಮನೋಜ್ ಬಾಜ್ಪಾಯಿ, ಪ್ರಿಯಾಮಣಿ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಫ್ಯಾಮಿಲಿ ಮ್ಯಾನ್' ಒರಿಜಿನಲ್ ಸೀರೀಸ್ನ ಮೊದಲ ಸೀಸನ್ ಬಿಡುಗಡೆಯಾಗಿದ್ದು, ಎರಡನೇ ಸೀಸನ್ಗಾಗಿ ತುದಿಗಾಲಲ್ಲಿ ಕಾಯುತ್ತಿರುವುದಾಗಿ ಸಿನಿ ಪ್ರಿಯರು ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ದಾಖಲಿಸಿದ್ದಾರೆ. ನೆಟ್ಫ್ಲಿಕ್ಸ್ನಲ್ಲಿ ಪ್ರಸಾರವಾದ 'ಸೇಕ್ರೆಡ್ ಗೇಮ್ಸ್' ಪ್ರಿಯರಿಗೆ ಫ್ಯಾಮಿಲಿ ಮ್ಯಾನ್ ಅದೇ ರೀತಿಯಾದ ಮನರಂಜನೆ ನೀಡಬಲ್ಲ. ಸೇಕ್ರೆಡ್ ಗೇಮ್ಸ್ ರೀತಿಯ ತಿರುಳನ್ನಿಟ್ಟುಕೊಂಡು ತಯಾರಿಸಿದ ರಸದೌತಣದಂತಿದೆ ಈ ಸೀರೀಸ್. ರಾಜ್ ನಿದಿಮೊರು ಹಾಗೂ ಕೃಷ್ಣ ಡಿ.ಕೆ. ಈ ಸೀರೀಸ್ಅನ್ನು ನಿರ್ದೇಶಿಸಿದ್ದಾರೆ.