ಬೆಂಗಳೂರು : ಅನೇಕ ಹಿಂದಿ ನಟರಿಗೆ ಕನ್ನಡ ಚಿತ್ರರಂಗದ ನಂಟಿರುವುದೇ ತಿಳಿದೇ ಇದೆ. ಆದರೆ, ಇಂದು ನಿಧನರಾಗಿರುವ ಒಂದು ಕಾಲದ ಚಾಕೊಲೇಟ್ ಹೀರೊ ಹಿರಿಯ ನಟ ರಿಷಿ ಕಪೂರ್ ಸಹ ಕನ್ನಡದ ಸಿನಿಮಾವೊಂದರ ರಿಮೇಕ್ನಲ್ಲಿ ನಟಿಸಿದ್ದರು.
1974ರಲ್ಲಿ ಬಿಡುಗಡೆ ಆದ ಹಿಂದಿಯ ಜಹ್ರೀಲ್ ಇನ್ಸಾನ್ ಚಿತ್ರದಲ್ಲಿ ರಿಷಿ ಬಣ್ಣ ಹಚ್ಚಿದ್ದರು. ಅದು ಕನ್ನಡದ ಹೆಸರಾಂತ ಕಾದಂಬರಿಕಾರ ತರಾಸು ಕಾದಂಬರಿ ಆಧಾರಿತ ಸಿನಿಮಾ. 1972ರಲ್ಲಿ ಡಾ.ವಿಷ್ಣುವರ್ಧನ್ ನಾಯಕನಾಗಿ ನಟಿಸಿ ಅಭೂತಪೂರ್ವ ಯಶಸ್ಸು ಗಳಿಸಿದ್ದ ‘ನಾಗರಹಾವು’ ಚಿತ್ರದ ರಿಮೇಕ್. ಕನ್ನಡದಲ್ಲಿ ವಿಷ್ಣುವರ್ಧನ್ ರಾಮಾಚಾರಿಯಾಗಿ ಮಿಂಚಿದರೆ, ಹಿಂದಿಯಲ್ಲಿ ರಿಷಿ ಕಪೂರ್ ಅರ್ಜುನ್ ಆಗಿ ಪಾತ್ರಕ್ಕೆ ಜೀವ ತುಂಬಿದ್ದರು.
ನಿರ್ದೇಶಕ ಪುಟ್ಟಣ್ಣ ಕಣಗಾಲ್ ಹಿಂದಿಯಲ್ಲೂ ಸಹ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ರಿಷಿ ಕಪೂರ್ ಆಗಿನ ಕಾಲದಲ್ಲಿ ಬೆಂಗಳೂರಿಗೆ ಬಂದು ಸಿನಿಮಾ ನೋಡಿ ಹಿಂದಿಯಲ್ಲಿ ರಿಮೇಕ್ ಮಾಡುವುದಕ್ಕೆ ಒಪ್ಪಿಕೊಂಡಿದ್ದರು. ಮೌಸಾಮಿ ಚಟರ್ಜೀ ಆರತಿ ಪಾತ್ರ ಮಾಡಿದ್ದರು. ಅಂದಹಾಗೆ ರಿಷಿ ಕಪೂರ್ ಎದುರಾಳಿ ಆಗಿ ರೆಬೆಲ್ ಸ್ಟಾರ್ ಅಂಬರೀಶ್ ಜಲೀಲನ ಪಾತ್ರ ಮಾಡಿದ್ದರು. ಆದರೆ, ಹಿಂದಿಯಲ್ಲಿ ತಯಾರಾದ ಕನ್ನಡದ ರಿಮೇಕ್ ಸಿನಿಮಾ ಅಷ್ಟೊಂದು ಯಶಸ್ಸು ಕಾಣಲಿಲ್ಲ.