ಮುಂಬೈ: ಅಶ್ಲೀಲ ಚಿತ್ರ ನಿರ್ಮಿಸಿರುವ ಆರೋಪದಡಿ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಬಂಧನವಾದ ಬೆನ್ನಲ್ಲೇ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ವೆಬ್ ಸೀರಿಸ್ನಲ್ಲಿ ಅವಕಾಶ ಬೇಕಾದರೆ ನಗ್ನವಾಗಿ ಆಡಿಷನ್ ನೀಡುವಂತೆ ಹೇಳಿದ್ದರು ಎಂದು ಮಾಡೆಲ್ವೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
ಸದ್ಯ ಈ ಮಾಡೆಲ್ ಮಾಡಿರುವ ವಿಡಿಯೋ ವೈರಲ್ ಆಗುತ್ತಿದ್ದು, ಇಂಡಸ್ಟ್ರಿಯಲ್ಲಿ ಸುಮಾರು 3-4 ವರ್ಷಗಳಿಂದ ಅವಕಾಶಕ್ಕಾಗಿ ಕಾಯುತ್ತಿದ್ದೆ. ಆದರೆ ಯಾವುದೂ ಸಿಕ್ಕಿರಲಿಲ್ಲ. ಕಳೆದ ಕೋವಿಡ್ ಸಂದರ್ಭದಲ್ಲಿ ನನಗೆ ಆಡಿಷನ್ಗೆ ಕರೆ ಬಂದಿತ್ತು. ಆದರೆ ವಿಡಿಯೋ ಕಾಲ್ ಮೂಲಕ ನಗ್ನವಾಗಿ ಆಡಿಷನ್ ನೀಡಲು ನನಗೆ ಹೇಳಿದಾಗ ನನಗೆ ಶಾಕ್ ಆಯಿತು. ತಕ್ಷಣವೇ ನಾನು ಆ ಅವಕಾಶವನ್ನು ತಿರಸ್ಕರಿಸಿದೆ. ಕಳೆದ ಬಾರಿ ಸಹ ನಾನು ಮಾಧ್ಯಮಗೋಷ್ಟಿ ನಡೆಸಿ ಅವರ ಬಂಧನಕ್ಕೆ ಆಗ್ರಹಿಸಿದ್ದೆ. ಈಗ ರಾಜ್ ಕುಂದ್ರಾ ಬಂಧನವಾಗಿದೆ.
ನನಗೆ ಉಮೇಶ್ ಕಾಮತ್ ಎಂಬುವರು ಕರೆ ಮಾಡಿ ವೆಬ್ ಸೀರಿಸ್ ಬಗ್ಗೆ ಮಾಹಿತಿ ನೀಡಿದ್ದರು. ಇದನ್ನು ರಾಜ್ ಕುಂದ್ರಾ ನಿರ್ಮಿಸುತ್ತಿದ್ದಾರೆ ಅಂತಲೂ ತಿಳಿಸಿದ್ದರು. ಅವರ ಬಗ್ಗೆ ನಾನು ಹೆಚ್ಚು ಕೇಳಿದಾಗ ಅವರು ನಟಿ ಶಿಲ್ಪಾ ಶೆಟ್ಟಿ ಪತಿ ಎಂದಿದ್ದರು ಅಂತ ವಿಡಿಯೋದಲ್ಲಿ ಮಾಡೆಲ್ ಹೇಳಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಈಗ ಬಾಲಿವುಡ್ನಲ್ಲಿ ತಲ್ಲಣ ಸೃಷ್ಟಿಸಿದೆ. ಇನ್ನಷ್ಟು ಪ್ರಕರಣ ಹೊರಬರುವ ಸಾಧ್ಯತೆ ಇದೆ ಅಂತಲೂ ಹೇಳಲಾಗುತ್ತಿದೆ.
ಲಂಡನ್ ಅಶ್ಲೀಲ ಚಿತ್ರ ಕಂಪನಿ ಜೊತೆ ರಾಜ್ ನಂಟು
ಉದ್ಯಮಿ ರಾಜ್ ಕುಂದ್ರಾ ಅವರ ಕಂಪನಿಯು ಲಂಡನ್ ಮೂಲದ ಸಂಸ್ಥೆಯೊಂದರ ಜೊತೆ ನಿಕಟ ಸಂಬಂಧಿಯೊಬ್ಬರ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಸಂಸ್ಥೆ ಅಶ್ಲೀಲ ಚಿತ್ರ ನಿರ್ಮಿಸುವ ಕಾರ್ಯ ಮಾಡುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಜ್ ಕುಂದ್ರಾ ಅವರ ‘ವಯಾನ್ ಇಂಡಸ್ಟ್ರೀಸ್’ ಲಂಡನ್ ಮೂಲದ ‘ಕೆನ್ರಿನ್’ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಇದು 'ಹಾಟ್‌ಶಾಟ್ಸ್' ಆ್ಯಪ್ ಮೂಲಕ ಅಶ್ಲೀಲ ಚಿತ್ರಗಳನ್ನು ಪ್ರಕಟಿಸುವುದರಲ್ಲಿ ಭಾಗಿಯಾಗಿದೆ. ಈ ಕೆನ್ರಿನ್ ಸಂಸ್ಥೆ ರಾಜ್ ಕುಂದ್ರಾ ಸೋದರ ಮಾವನ ಒಡೆತನದಲ್ಲಿದೆ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೊತೆಗೆ ಅವರ ಮುಂಬೈ ಕಚೇರಿಯಲ್ಲಿ ಶೋಧ ನಡೆಸಿದ್ದ ಪೊಲೀಸರಿಗೆ ಹಲವು ಸುಳಿವು ಸಿಕ್ಕಿದ್ದು, ವಾಟ್ಸಾಪ್ ಚಾಟ್, ಇ-ಮೇಲ್ ಮತ್ತು ಕೆಲ ಆಶ್ಲೀಲ ಚಿತ್ರಗಳ ಕಳುಹಿಸಿರುವ ದಾಖಲೆ ಸಹ ಪತ್ತೆಯಾಗಿದೆ ಎನ್ನಲಾಗಿದೆ.