ಮಹಿಳೆಯರು ಕೆಲಸಕ್ಕೆ ಹೋಗಲು ಹೊರಗೆ ಕಾಲಿಟ್ಟಾಗಿನಿಂದ ಮೀಟೂ ಆಂದೋಲನ ಪ್ರಾರಂಭವಾಯಿತು ಎಂಬ ಹೇಳಿಕೆ ನೀಡಿದ್ದ ಬಾಲಿವುಡ್ ಹಿರಿಯ ನಟ ಮುಖೇಶ್ ಖನ್ನ, ಇದೀಗ ನಾನು ಆ ರೀತಿ ಹೇಳಿಲ್ಲ. ನನ್ನ ಮಾತನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.
ನನ್ನ ಹೇಳಿಕೆಯನ್ನು ಜನರು ಅತ್ಯಂತ ತಪ್ಪು ರೀತಿಯಲ್ಲಿ ಅರ್ಥಮಾಡಿಕೊಂಡಿದ್ದಾರೆ. ಇದು ನನಗೆ ಆಶ್ಚರ್ಯವಾಗಿದೆ. ಅಲ್ಲದೆ ನನ್ನ ಹೇಳಿಕೆಯನ್ನು ಅತ್ಯಂತ ದೋಷಯುಕ್ತವಾಗಿ ನೋಡಲಾಗುತ್ತಿದೆ. ನಾನು ಮಹಿಳೆಯರ ವಿರುದ್ಧ ಎಂದೂ ಮಾತನಾಡಿಲ್ಲ ಎಂದು ಮುಖೇಶ್ ಪ್ರತಿಕ್ರಿಯಸಿದ್ದಾರೆ. ಆದರೆ, ಹಲವರು ಮಹಿಳೆಯರ ಬಗ್ಗೆ ಗೌರವವನ್ನು ಹೊಂದಿಲ್ಲ ಎಂದು ಹೇಳುತ್ತೇನೆ. ಮಹಿಳೆಯರು ಕೆಲಸ ಮಾಡಬಾರದು ಎಂದು ನಾನು ಎಂದಿಗೂ ಹೇಳಲಿಲ್ಲ ಎಂದರು.
ಕಳೆದ ಒಂದು ವರ್ಷದ ಹಿಂದೆ ಮಹಿಳೆಯರ ಬಗ್ಗೆ ಒಂದು ವಿಡಿಯೋ ಮಾಡಿದ್ದೆ. ಅದ್ರಲ್ಲೂ ಕೂಡ ನಾನು ಮಹಿಳೆಯರು ಹೊರ ಹೋಗಿ ಕೆಲಸ ಮಾಡಬಾರದು ಎಂದು ಹೇಳಿಲ್ಲ. ಈಗ ನಾನು ಹೇಗೆ ಹೇಳಲು ಸಾಧ್ಯ?. ನಾನು ಎಲ್ಲರಲ್ಲೂ ವಿನಂತಿ ಮಾಡುತ್ತೇನೆ, ದಯಮಾಡಿ ನನ್ನ ಹೇಳಿಕೆಯನ್ನು ತಿರುಚಬೇಡಿ ಎಂದು ಮುಖೇಶ್ ಮನವಿ ಮಾಡಿದ್ದಾರೆ.
ನಮ್ಮ ದೇಶದಲ್ಲಿ, ಮಹಿಳೆಯರು ಪ್ರತಿ ಕ್ಷೇತ್ರದಲ್ಲೂ ಯಶಸ್ವಿಯಾಗಿದ್ದಾರೆ. ರಕ್ಷಣಾ ಸಚಿವರಾಗಿ, ಹಣಕಾಸು ಸಚಿವರಾಗಿ, ವಿದೇಶಾಂಗ ಸಚಿವರಾಗಿ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಮಹಿಳೆಯರು ಪ್ರಗತಿ ಸಾಧಿಸಿದ್ದಾರೆ.
ನನ್ನ ಸಿನಿಮಾ ವೃತ್ತಿಯಲ್ಲಿ ಸಾಮಾನ್ಯ ಜನರ ಬಗ್ಗೆ ಹಾಗೂ ಮಹಿಳೆಯರ ಬಗ್ಗೆ ಹೆಚ್ಚಿನ ಗೌರವ ಹೊಂದಿದ್ದೇನೆ. ಅಕಸ್ಮಾತಾಗಿ ನನ್ನ ಹೇಳಿಕೆಯಿಂದ ಮಹಿಳೆಯರ ಮನಸ್ಸಿಗೆ ನೋವಾಗಿದ್ದರೆ ನನಗೆ ತುಂಬಾ ಅಸಮಾಧಾನವಾಗುತ್ತದೆ ಎಂದಿದ್ದಾರೆ. ಇವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಮೀಟೂ ವಿವಾದ ಭುಗಿಲೆದ್ದಿತ್ತು.