ಬಾಲಿವುಡ್ ಸಿನಿರಂಗದ ಗೌರವಾನ್ವಿತ ಮತ್ತು ಉತ್ತಮ ನಟಿಯರಲ್ಲಿ ಒಬ್ಬರಾದ ಮನಿಷಾ ಕೊಯಿರಾಲಾಗೆ ಇಂದು ಹುಟ್ಟುಹಬ್ಬ. ಹಿಂದಿ ಚಿತ್ರರಂಗದ ಅಗ್ರಗಣ್ಯ ತಾರೆಯರೊಂದಿಗೆ ನಟಿಸಿರುವ ಇವರು ನೇಪಾಳದ ಕಠ್ಮಂಡುವಿನಲ್ಲಿ 1970ರಲ್ಲಿ ಜನಿಸಿದರು.
ಮನಿಷಾ ವಿಮರ್ಶಾತ್ಮಕವಾಗಿಯೂ ಮೆಚ್ಚುಗೆ ಪಡೆದ ನಟಿಯಾಗಿದ್ದು, ಕಮರ್ಷಿಯಲ್ ಹಾಗೂ ಆರ್ಟ್-ಹೌಸ್ ಸಿನಿಮಾಗಳಲ್ಲಿ ಜನಪ್ರಿಯತೆ ಗಳಿಸಿದ್ದಾರೆ. 90ರ ದಶಕದಲ್ಲಿ ಬಾಲಿವುಡ್ ಚಿತ್ರರಂಗವನ್ನು ಆಳಿದ ಕೆಲ ನಟಿಯರಲ್ಲಿ ಇವರೂ ಕೂಡಾ ಒಬ್ಬರು. ಇನ್ನು 1991ರಲ್ಲಿ ಸುಭಾಷ್ ಘಾಯ್ ನಿರ್ದೇಶನದ ಸೌದಾಗರ್ ಚಿತ್ರವು ಈಕೆ ನಟಿಸಿದ ಮೊದಲ ಸಿನಿಮಾ ಆಗಿತ್ತು.
ಸತತ ಸೋಲುಗಳ ನಂತರ ಬಾಲಿವುಡ್ನಲ್ಲಿ ದೃಢವಾಗಿ ನೆಲೆನಿಂತ ಮನಿಷಾಗೆ 2012ರಲ್ಲಿ ಕ್ಯಾನ್ಸರ್ ಖಾಯಿಲೆ ವಕ್ಕರಿಸಿಕೊಂಡಿತು. ಈ ಬಳಿಕ ಚಿತ್ರರಂಗದಿಂದ ದೂರವೇ ಉಳಿದ ಅವರು, ಡಿಯರ್ ಮಾಯಾ, ಲಸ್ಟ್ ಸ್ಟೋರೀಸ್, ಸಂಜು ಸೇರಿದಂತೆ ಅನೇಕ ಸಿನಿಮಾಗಳ ಮೂಲಕ ಮತ್ತೆ ತೆರೆಗೆ ಬಂದರು.
ಸಾಮಾಜಿಕ ಕಾರ್ಯದಲ್ಲಿ ಮನಿಷಾ:
ಕೊಯಿರಾಲಾ ಸಾಮಾಜಿಕ ಕೆಲಸಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ನಿರ್ದಿಷ್ಟವಾಗಿ ಮಹಿಳಾ ಹಕ್ಕುಗಳನ್ನು ಉತ್ತೇಜಿಸಲು, ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಲು ಮತ್ತು ವೇಶ್ಯಾವಾಟಿಕೆಗಾಗಿ ನೇಪಾಳಿ ಹುಡುಗಿಯರ ಕಳ್ಳಸಾಗಣೆಯನ್ನು ತಡೆಗಟ್ಟಲು ಕೆಲ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ್ದಾರೆ. ಸೆಪ್ಟೆಂಬರ್ 1999ರಲ್ಲಿ ಭಾರತದ UNFPA ಗುಡ್ವಿಲ್ ರಾಯಭಾರಿಯಾಗಿ ನೇಮಕಗೊಂಡರು.
ಕ್ಯಾನ್ಸರ್ ವಿರುದ್ಧ ಹೋರಾಟ:
2012ರಲ್ಲಿ ಮನಿಷಾ ಕ್ಯಾನ್ಸರ್ ರೋಗಕ್ಕೆ ತುತ್ತಾದರು. ಈ ಬಳಿಕ ಮೇ 2013ರಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದರು. ಇದಾದ ನಂತರ ಭಯಾನಕ ಕಾಯಿಲೆಯೊಂದಿಗೆ ಹೋರಾಡುತ್ತಿರುವ ಇವರು ಇತರರಿಗೆ ಸ್ಫೂರ್ತಿ ನೀಡಲು ತನ್ನ ಸೆಲೆಬ್ರಿಟಿ ಲೈಫ್ ಮತ್ತು ವೈಯಕ್ತಿಕ ಜೀವನದ ಕಥೆಯನ್ನು ಜನರಿಗೆ ತಿಳಿಸಲು ಮುಂದಾದರು. ಅಷ್ಟೇ ಅಲ್ಲದೆ, ಕ್ಯಾನ್ಸರ್ ವಿರುದ್ಧ ಹೋರಾಡಲು ಬೇಕಾದ ಆತ್ಮಸ್ಥೈರ್ಯವನ್ನು ಜನರಿಗೆ ತುಂಬಿದರು. ಇವರು ಈಗಲೂ ಸಹ ಶಾಲೆಗಳು, ಆಸ್ಪತ್ರೆಗಳು ಮತ್ತು ಸಂಸ್ಥೆಗಳಲ್ಲಿ ವಿವಿಧ ವಿಷಯಗಳ ಕುರಿತು ಭಾಷಣಗಳನ್ನು ನೀಡುತ್ತಾರೆ.
'ಬಾಂಬೆ' ಸಿನಿಮಾದ ಅವಿಸ್ಮರಣೀಯ ನಟನೆ:
ಮಣಿರತ್ನಂ ನಿರ್ದೇಶನದ ರೊಮ್ಯಾಂಟಿಕ್ ಸಿನಿಮಾ ಮನಿಷಾ ಅವರ ಬಹುಮುಖ ನಟನಾ ಕೌಶಲ್ಯವನ್ನು ಹೊರಜಗತ್ತಿಗೆ ತೋರಿಸಿತ್ತು. ಪ್ರೇಮಿಯಾಗಿ, ಹೆಂಡತಿಯಾಗಿ ಮತ್ತು ಅಸಹಾಯಕ ತಾಯಿಯಾಗಿ ನಟಿಸಿದ ಅವರ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. 1992ರ ಅಂದಿನ ಬಾಂಬೆಯಲ್ಲಿ ನಡೆದ ಗಲಭೆಯ ಆಧಾರದ ಮೇಲೆ ಈ ಸಿನಿಮಾ ಮಾಡಲಾಗಿತ್ತು.