ಮುಜಾಫರ್‌ಪುರ (ಬಿಹಾರ): ಸುಶಾಂತ್ ಸಿಂಗ್ ಸಾವು ಹಿನ್ನೆಲೆಯಲ್ಲಿ ಬಾಲಿವುಡ್ ದಿಗ್ಗಜರಾದ ಕರಣ್ ಜೋಹರ್, ಆದಿತ್ಯ ಚೋಪ್ರಾ, ಸಾಜಿದ್ ನಾಡಿಯಾಡ್ವಾಲಾ, ಸಲ್ಮಾನ್ ಖಾನ್, ಸಂಜಯ್ ಲೀಲಾ ಬನ್ಸಾಲಿ, ಭೂಷಣ್ ಕುಮಾರ್, ಏಕ್ತಾ ಕಪೂರ್ ಮತ್ತು ನಿರ್ಮಾಪಕ-ನಿರ್ದೇಶಕ ದಿನೇಶ್ ವಿಜನ್ ಸೇರಿದಂತೆ ಹಿಂದಿ ಚಿತ್ರಲೋಕದ 8 ಮಂದಿ ವಿರುದ್ಧ ವಕೀಲ ಸುಧೀರ್ ಕುಮಾರ್ ಓಜಾ ಎಂಬುವರು ದೂರು ದಾಖಲಿಸಿದ್ದಾರೆ.
ಆತ್ಮಹತ್ಯೆಗೆ ಪ್ರಚೋದನೆ, ಪಿತೂರಿ ಸೇರಿದಂತೆ ವಿವಿಧ ಪ್ರಕರಣಗಳ ಅಡಿಯಲ್ಲಿ ಸ್ಥಳೀಯ ವಕೀಲ ಸುಧೀರ್ ಕುಮಾರ್ ಓಜಾ ಈ ದೂರು ದಾಖಲಿಸಿದ್ದಾರೆ. ನಟ ಸುಶಾಂತ್ ಸಿಂಗ್ ಅವರ ಆತ್ಮಹತ್ಯೆಯ ಹಿಂದೆ ಅನೇಕ ಬಾಲಿವುಡ್ ನಟರು ಮತ್ತು ನಿರ್ಮಾಪಕರ ಪಾತ್ರ ಇರುವ ಬಗ್ಗೆ ಅವರ ಅಭಿಮಾನಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಶಾಂತ್ ಸಿಂಗ್ ಅವರಿಂದ ಹಲವು ಸಿನಿಮಾಗಳನ್ನು ಕಿತ್ತುಕೊಳ್ಳುವ ಮೂಲಕ ಅವರನ್ನು ಅವಕಾಶವಂಚಿತರನ್ನಾಗಿ ಮಾಡಲಾಗಿತ್ತು. ಇದೇ ಕೊರಗು ಅವರನ್ನು ಸಾವಿನ ಹಾದಿಗೆ ಪ್ರೇರೇಪಿಸಿದೆ. ಹಾಗಾಗಿ ಪರೋಕ್ಷವಾಗಿ ಇವರ ಸಾವಿನ ಹಿಂದೆ ಸೂಚಿಸಿದ ವ್ಯಕ್ತಿಗಳ ಕೈವಾಡವಿದೆ ಎಂದು ಆರೋಪಿಸಿ ಪ್ರಕರಣ ದಾಖಲಿಸುತ್ತಿರುವುದಾಗಿ ಸುಧೀರ್ ಕುಮಾರ್ ಓಜಾ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.